ಬೆಂಗಳೂರು: ಡಾ.ರಾಜ್ ಕುಮಾರ್ ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇಂದು ಬೆಳಿಗ್ಗೆ 11.40 ಗಂಟೆಯಲ್ಲಿ ಪುನೀತ್ ರಾಜ್ ಕುಮಾರ್ ಅವರು ಸಾವನ್ನಪ್ಪಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರಿಗೆ ನಿನ್ನೆ ರಾತ್ರಿಯೇ ಆರೋಗ್ಯದಲ್ಲಿ ಏರುಪೇರಾಗಿತ್ತು.
ಆದರೆ ಇದನ್ನು ಪುನೀತ್ ರಾಜ್ ಕುಮಾರ್ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಲ್ಲದೆ ಇಂದು ಬೆಳಿಗ್ಗೆ ಎಂದಿನಂತೆ ಜಿಮ್ ವರ್ಕ್ ಔಟ್ ತೆರಳಿದ್ದರು, ಅಲ್ಲಿ ಮಾಡುವ ವೇಳೆ ಪುನೀತ್ ರಾಜ್ ಕುಮಾರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತು.
ಡಾ.ರಾಜ್ ಕುಮಾರ್ ಕುಟುಂಬದ ತಜ್ಞ ವೈದ್ಯರಾದ ಡಾ.ರಮಣ ಅವರ ಬಳಿ ತಕ್ಷಣವೆ ಕರೆದುಕೊಂಡು ಹೋಗಲಾಯಿತು. ಡಾ.ರಮಣ ಅವರ ಸಲಹೆ ಮೇರೆಗೆ ಕೂಡಲೇ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ತುರ್ತು ಚಿಕಿತ್ಸೆ ಗಾಗಿ ಕೂಡಲೇ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 11.40 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅತಿಯಾದ ವರ್ಕ್ ಔಟ್ ಹಾಗೂ ಡಯಟ್ ಮಾಡುತ್ತಿರುವುದು ಪುನೀತ್ ರಾಜ್ ಕುಮಾರ್ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತು ಎಂದು ತಿಳಿದು ಬಂದಿದೆ.
ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ರಾಜ್ ಕುಟಂಬದ ಆಕ್ರಂದನ ಹೇಳ ತೀರದಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಶಿವರಾಜ್ ಕಮಾರ್ ಸೇರಿದಂತೆ ಅವರ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದರು.
ಅಲ್ಲದೆ ಸ್ಯಾಂಡಲ್ ವುಡ್ ನ ನಟ-ನಟಿಯರ ದಂಡು ಹಾಗೂ ಅಪಾರ ಅಭಿಮಾನಿಗಳ ಬಳಗ ಆಸ್ಪತ್ರೆ ಬಳಿ ಜಮಾಯಿಸಿತು. ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಕಂಬನಿಗೈಯ್ದರು.
ಪುನೀತ್ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಅಮೇರಿಕಾದಲ್ಲಿದ್ದು, ಅವರಿಗೂ ಈ ವಿಚಾರ ತಿಳಿಸಿದ್ದು, ಅವರು ಕೂಡ ತಕ್ಷಣವೇ ಹೊರಟು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಮಧ್ಯಾಹ್ನದ ನಂತರ ವಿಕ್ರಂ ಆಸ್ಪತ್ರೆಯಿಂದ ಸ್ಟೇಡಿಯಂಗೆ ಪುನೀತ್ ಅವರ ಪಾರ್ಥಿವ ಶರೀರ ತರಲಾಗುವುದು

