ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಆಗಿ ಘೋಷಣೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:  ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಕನ್ನಡವನ್ನು ರಾಜ್ಯದ ಗಡಿಯೊಳಗೆ ಸೀಮಿತವಾಗಿ ನೋಡುತ್ತಿಲ್ಲ. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮಾಡಬೇಕು. ಹಾಗಾಗಿ ಕಿತ್ತೂರು ಕರ್ನಾಟಕ ಮಾಡಬೇಕೆಂದು ತೀರ್ಮಾನಿಸಿದ್ದೇವೆ ಎಂದರು.

ಗಡಿ ವಿವಾದಗಳು ಇದ್ದಾಗಲೂ ಮುಂಬೈ ಕರ್ನಾಟಕ ಅನ್ನಬಾರದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯ ಶಕ್ತಿಶಾಲಿಯಾಗಿರುತ್ತದೆ ಎಂದು ಹೇಳಿ, ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು. ಕನ್ನಡ ಭಾಷೆ ತಿಳಿಯದವರಿಗೆ ಕನ್ನಡ ಭಾಷೆ ಕಲಿಸಬೇಕು ಎಂದರು.

ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಕನ್ನಡ ನಮ್ಮ ದೇವರು. ಕನ್ನಡವೆಂಬ ತಾಯಿ ದೇವರನ್ನು ಸಂರಕ್ಷಿಸಬೇಕು. ಕನ್ನಡವನ್ನು ಬೃಹತ್ ಹೆಮ್ಮರವಾಗಿ ಬೆಳಸಬೇಕು ಎಂದು ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕೆರ ನೀಡಿದರು.

ಭಾಷೆ ಸದೃಢವಾಗಿದ್ದರೆ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಭಾರತದಲ್ಲಿ ಅತ್ಯಂತ ಪುರಾತನವಾದ ಭಾಷೆ ಕನ್ನಡ. ಕನ್ನಡ ಸಿಂಧೂ ನಾಗರಿಕತೆಗೂ ಮೊದಲು ಬಳಕೆಯಲ್ಲಿದ್ದ ಭಾಷೆ. ಸಹಸ್ರಾರು ವರ್ಷಗಳಿಂದ ಬಳಕೆಯಲ್ಲಿರುವ ಕನ್ನಡದ ಶಕ್ತಿ ಕಸಿಯಲು ಸೂರ್ಯ, ಚಂದ್ರರು ಇರುವವರೆಗೂ ಅಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡದ ಮಕ್ಕಳಿಗೆ ಉದ್ಯೋಗದ ಭರವಸೆಯನ್ನು ನೀಡಬೇಕಿದೆ. ಆಗ ಮಾತ್ರ ಕನ್ನಡ, ಕನ್ನಡಿಗರ ಶಕ್ತಿ ಹೆಚ್ಚುತ್ತದೆ. ಅದಕ್ಕಾಗಿ ಕೈಗಾರಿಕಾ ತರಬೇತಿ ಕೇಂದ್ರಗಳು, ಪಾಲಿಟೆಕ್ನಿಕ್ ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಜ್ಯದಲ್ಲಿ ಆರಂಭವಾಗುವ ಉದ್ದಿಮೆಗಳಲ್ಲಿ ಕೌಶಲ ವಲಯದ ಶೇಕಡ 75ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದುಎಂದು ಮುಖ್ಯಮಂತ್ರಿಗಳು ತಿಳಿಸಿದರು.