ಮೈಸೂರು: ಮೈಸೂರು ಸಮೀಪದ ಚಾಂಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ.
ಮಳೆಯಿಂದ ಇತ್ತೀಚೆಗೆ ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ ತೆರಳುವ ರಸ್ತೆ ಕುಸಿದಿತ್ತು. ಆದರೆ ಅದರ ದುರಸ್ತಿ ಕಾರ್ಯ ವಿಳಂಬವಾದ ಕಾರಣ ಇದೀಗ ಮತ್ತೆ ಅದೇ ಸ್ಥಳದಲ್ಲಿ ಭೂಕುಸಿತವಾಗಿದೆ.
ಈ ಹಿಂದೆ ಕುಸಿದಿದ್ದ ರಸ್ತೆಯ ದುರಸ್ತಿ ವಿಳಂಬವಾಗುತ್ತಿರುವುದರಿಂದ ಸುಮಾರು 70 ಅಡಿಯಷ್ಟು ರಸ್ತೆ ತಡೆಗೋಡೆ ಸಹಿತ ಕುಸಿದು ಬಿದ್ದಿದೆ.
ಅ. 20ರಂದು ಭಾರೀಮಳೆಗೆ ರಸ್ತೆ ಕುಸಿದಿತ್ತು. ಸ್ಥಳಕ್ಕೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸಹ ಭೇಟಿ ನೀಡಿ ದುರಸ್ತಿಗೆ ಸೂಚಿಸಿದ್ದರು.
ದುರಸ್ತಿ ಕಾರ್ಯ ವಿಳಂಬ ಹಿನ್ನೆಲೆ ಮತ್ತದೇ ಜಾಗದಲ್ಲಿ ಭೂ ಕುಸಿತ ಉಂಟಾಗಿದೆ. ದುರಸ್ತಿ ಕಾರ್ಯ ವಿಳಂಬವಾದರೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದುರಸ್ತಿಗೆ ತಜ್ಞರು ಸಲಹೆ ನೀಡಿದ್ದಾರೆ.

