ಬೆಂಗಳೂರು: ರಸ್ತೆ ಒತ್ತುವರಿ ಮಾಡಿ ಚರ್ಚ್ ನ ತಡೆಗೋಡೆ ನಿರ್ಮಿಸಿದ ಪ್ರಕರಣ ಸಂಬAಧ ಹೈಕೋರ್ಟ್ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಖುದ್ದು ಹಾಜರಾಗುವಂತೆ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಕೋರಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪಿ.ಶ್ರೀಕಂಠಮೂರ್ತಿ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆಯ ವೇಳೆ ಪಾಲಿಕೆಯ ಪರ ವಕೀಲರು ಹೈಕೋರ್ಟ್ ನಿರ್ದೇಶನದಂತೆ ರಸ್ತೆ ಒತ್ತುವರಿ ತೆರವುಗೊಳಿಸಲು ಅಕ್ಟೋಬರ್ 29ರಂದೇ ಪಾಲಿಕೆಯ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಆದರೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ತೆರವು ಕಾರ್ಯಾಚರಣೆಗೆ ಅಡ್ಡಿಯಾಯಿತು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಬಹುದು ಎಂಬ ಕಾರಣದಿಂದ ಒತ್ತುವರಿ ತೆರವುಗೊಳಿಸಲಾಗಿಲ್ಲ ಎಂದು ವಿವರಿಸಿದರು.
ಇದಕ್ಕೆ ನ್ಯಾಯಪೀಠವು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದವರ ಮೇಲೆ ಯಾಕೆ ಎಫ್ ಐ ಆರ್ ದಾಖಲಿಸಿಲ್ಲವೆಂದು ಪ್ರಶ್ನಿಸಿತು. ಇದಕ್ಕೆ ಪಾಲಿಕೆಯ ಪರ ವಕೀಲರು ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದರೆಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನೊಪ್ಪದ ನ್ಯಾಯಪೀಠ ಅ.29ರಂದು ನೀಡಿದ್ದ ನಿರ್ದೇಶನದಂತೆ ಒತ್ತುವರಿ ತೆರವುಗೊಳಿಸದೇ ಇರುವುದಕ್ಕೆ ಆಯುಕ್ತರು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಆದೇಶಿಸಿ, ವಿಚಾರಣೆಯನ್ನು 2022ರ ಜನವರಿಗೆ ಮುಂದೂಡಿದೆ.

