ಹಂಸಲೇಖ ವಿರುದ್ಧ ಬ್ರಾಹ್ಮಣರ ಪ್ರತಿಭಟನೆ

ಮೈಸೂರು: ಖ್ಯಾತ ಹಿನ್ನೆಲೆ ಗಾಯಕ ಹಂಸಲೇಖ ವಿರುಧ್ಧ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಮತ್ತು ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ಹಾಗೂ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಂಘದ ನೇತೃತ್ವದಲ್ಲಿ ಟಿ ಕೆ ಲೇಔಟ್ ನಲ್ಲಿರುವ ಕೃಷ್ಣಧಾಮ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಷ್ಟ್ರ ಸಂತ, ಸಮಗ್ರ ಹಿಂದೂ ಸಮಾಜದ ಹಿತಚಿಂತಕರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮೈದೂರಿನ ಕಾರ್ಯಕ್ರಮದಲ್ಲಿ ನಿಂದಿಸಿರುವ ಚಲನಚಿತ್ರ ಗೀತೆಗಳ ಸಾಹಿತ್ಯ ರಚನೆಕಾರ ಹಂಸಲೇಖ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿವಿಧ ಸಂಘಗಳು ಒಟ್ಟಾಗಿ ಸೇರಿ ಬೃಹತ್ ಪ್ರತಿಭಟನೆ ನಡೆಸಿ ನಂತರ ಸರಸ್ವತಿಪುರಂ ಆರಕ್ಷಕ ಠಾಣೆಗೆ ಹಂಸಲೇಖರನ್ನು ಬಂಧಿಸುವಂತೆ ದೂರು ನೀಡಲಾಯಿತು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು ಮಾತನಾಡುತ್ತಾ ಅಶುದ್ಧ ಶಬ್ದಗಳನ್ನು ಪ್ರಯೋಗಿಸಿ ಪೇಜಾವರ ಶ್ರೀಗಳನ್ನು ನಿಂದಿಸಿದ್ದಾರೆ. ಅದಲ್ಲದೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರೆ ಅಲ್ಲದೆ ಬಿಳಿಗಿರಿಯ ರಂಗನಾಥ ಸ್ವಾಮಿ ಪೂಜಾ ಕೈಂಕರ್ಯದ ಕುರಿತು ಹಾಗು ಹಿಂದೂ ಸಂಪ್ರದಾಯಗಳ ಬಗ್ಗೆಯೂ ಅವಹೇಳನವಾಗಿ ಮಾತನಾಡಿರುವುದು ಖಂಡನೀಯ ಎಂದರು.

ನಂತರ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳ ಅಧ್ಯಕ್ಷ ರವಿ ಶಾಸ್ತ್ರಿ ಅವರು ಮಾತನಾಡಿ, ಹಂಸಲೇಖ ಅವರು ಜನ ಸಮೂಹದಲ್ಲಿ ಗುರುಗಳನ್ನು ಹಾಗೂ ಆಚರಣೆಗಳನ್ನು ನಿಂದಿಸಿ, ಈಗ ಒಂದು ಕೋಣೆಯಲ್ಲಿ ನಿಂತು ವಿಡಿಯೋ ಮಾಡಿ ಕ್ಷಮೆಯಾಚಿಸುವದು ಸರಿಯಲ್ಲ. ಅಸಂಖ್ಯಾತ ಹಿಂದೂಗಳ ಮನಸ್ಸು ನೋಯಿಸಿರುವ ಅವರ ವಿರುದ್ಧ ರಾಜ್ಯ ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನದಲ್ಲಿ ಕ್ಷಮೆ ಕೇಳದಿದ್ದಲ್ಲಿ ವಿಪ್ರ ಸಮಾಜದಿಂದ ಹಂಸಲೇಖರ ಮನೆ ಮುಂದೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳದ ಗೌರವಾಧ್ಯಕ್ಷ ಎಂ ಕೆ ಪುರಾಣಿಕ್, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಸುಪ್ರಭಾ, ವಿಪ್ರ ಜಾಗೃತಿ ವೇದಿಕೆಯ ರಮೇಶ್, ಮುಳ್ಳೂರು ಸುರೇಶ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ರಾಕೇಶ್ ಭಟ್, ವಿಕಾಸ್ ಶಾಸ್ತ್ರಿ, ವಿಜಯ್ ಕುಮಾರ್, ಪ್ರಶಾಂತ್, ಸುಚೀಂದ್ರ, ಚಕ್ರಪಾಣಿ, ನಟ ಬಾಲಕೃಷ್ಣ, ನಾಗಶ್ರೀ, ವಿಘ್ನೇಶ್ವರ್ ಭಟ್, ಸುದರ್ಶನ್, ಮಂಜುನಾಥ್ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.