ಮೈಸೂರು: ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ವಿಧಾನ ಪರಿಷತ್ ನಲ್ಲಿಯೂ ಸಂಪೂರ್ಣ ಬಹುಮತವನ್ನು ಪಡೆಯಲಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ ಗೆ ಚುನಾವಣೆ ನಡೆಯುವ ಈ ಸಂದರ್ಭದಲ್ಲಿ ರಾಜ್ಯಾದ್ಯಾತ ಪ್ರವಾಸದ ಸಂದರ್ಭದಲ್ಲಿ ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ನ ಮತದಾರರೇನಿದ್ದಾರೆ ಅವರಿಗಾಗಿ ನಡೆಸಿದ ಸಭೆಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ-ರಾಜ್ಯಗಳು ಮಾಡುತ್ತಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಗಮನ ಸೆಳೆಯುತ್ತಿದ್ದೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15-16ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಪ್ರದೇಶಕ್ಕೆ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿಯವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದರು.
ಬಿಜೆಪಿ ಹೆಚ್ಚು ಸ್ಥಾನವನ್ನು ಪಡೆದು ಈಗಾಗಲೇ ವಿಧಾನಸಭೆಯಲ್ಲಿ ಪೂರ್ಣ ಬಹುಮತವಿದೆ. ವಿಧಾನ ಪರಿಷತ್ ನಲ್ಲಿ ಕೂಡ ಪೂರ್ಣ ಬಹುಮತ ಬರಲಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದರು.
ಮಳೆ ಅವಾಂತರ ಸಂದರ್ಭದಲ್ಲಿ ಬಿಜೆಪಿ ಶಂಖ ಊದುತ್ತಿದ್ದಾರೆ ಎಂದು ಟ್ವಿಟ್ ಮಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ, ಶಂಖ ಊದಲೂ ಅವರ ಬಳಿ ಜನರೇ ಇಲ್ಲ. ನಾವು ಗ್ರಾಮೀಣಾಭಿವೃದ್ಧಿ ಬಗ್ಗೆ ಅಭಿವೃದ್ಧಿ ಶಂಖ ಊದುತ್ತಾ ಇದ್ದೇವೆ. ನಮ್ಮ ಬಳಿ ಜನ ಇದ್ದಾರೆ. ಅವರ ಬಳಿ ಯಾರೂ ಇಲ್ಲ. ಪರಿಷತ್ ಚುನಾವಣೆಯಲ್ಲಿ ಎಷ್ಟು ಜನ ಗೆಲ್ತಾರೆ ಅವರು ನೋಡೋಣಾ ಎಂದು ಈಶ್ವರಪ್ಪ ಲೇವಡಿ ಮಾಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿದ ಅವರು ನಮ್ಮ ಸರಕಾರ ಸ್ವಚ್ಛವಾಗಿದೆ. ಯಾವೊಬ್ಬ ಅಧಿಕಾರಿಯೂ ಜನಪ್ರತಿನಿಧಿಗಳಿಗೆ ಹಣ ನೀಡುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ, ಎಸ್.ಟಿ.ಸೋಮಶೇಖರ್, ಗ್ರಾಮಾಂತರ ಅಧ್ಯಕ್ಷರಾದ ಮಂಗಳಾ, ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಮತ್ತಿತರರಿದ್ದರು.

