ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಾಹಿತಿ ಬೈರಪ್ಪ ಅವರು, ಚಾಮುಂಡಿಬೆಟ್ಟ ಉಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೇAದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟವನ್ನು ಕಾಂಕ್ರೀಟ್ ಕಾಡಾಗಿ ಪರಿವರ್ತಿಸುವ ಬದಲು, ಅಲ್ಲಿ ಈಗ ತಲೆಎತ್ತಿರುವ ಕಟ್ಟಡಗಳನ್ನು ಕೆಡವಬೇಕು ಎಂದು ಬೈರಪ್ಪನವರು ಪತ್ರದಲ್ಲಿ ಕೋರಿದ್ದಾರೆ.
ತೀರ್ಥಕ್ಷೇತ್ರಗಳ ಪುನಶ್ಚೇತನ, ಆಧ್ಯಾತ್ಮ ಮತ್ತು ಪಾರಂಪರಿಕ ವರ್ಧನೆ ಯೋಜನೆಯಡಿ(ಪ್ರಸಾದ) ಚಾಮುಂಡಿಬೆಟ್ಟದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ನೋಡಿ ನೋವುಂಟಾಗಿದೆ ಎಂದು ಬರೆದಿದ್ದಾರೆ.
ಬೆಟ್ಟದ ನೈಸರ್ಗಿಕ ಸೌಂದರ್ಯ ಉಳಿಯಬೇಕು, ಆಧುನಿಕ ಶೈಲಿಯ ಕಟ್ಟಡಗಳು ತಲೆ ಎತ್ತಬಾರದು, ಪರಿಸರಕ್ಕೆ ಪೂರಕವಾದ ಹೊಸ ಪರಿಕಲ್ಪನೆಯ ಅಭಿವೃದ್ಧಿಯ ಕೆಲಸಗಳು ನಡೆಯುವುದರಿಂದ ಒಳಿತಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ನಿರ್ಮಾಣ ಚಟುವಟಿಕೆಗಳ ಬದಲು, ಅಲ್ಲಿರುವ ಕಟ್ಟಡಗಳನ್ನು ಕೆಡವಬೇಕು. ವಿಐಪಿಗಳ ವಾಹನ ಸೇರಿದಂತೆ ಎಲ್ಲ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಬೇಕು. ಎಲೆಕ್ಟಿçಕ್ ಬಸ್ ಸಂಚಾರ ಆರಂಭಿಸಬೇಕು ಎಂಬ ಉತ್ತಮವಾದ ಹಲವು ಸಲಹೆಗಳನ್ನು ಪತ್ರದಲ್ಲಿ ಬೈರಪ್ಪ ನೀಡಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಯವರು ಮಾತ್ರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಬೇಕು. ಇತರರಿಗೆ ಅವಕಾಶ ಕೊಡಬಾರದು. ಆಧ್ಯಾತ್ಮ ಹಾಗೂ ಪ್ರಶಾಂತತೆ ಬಯಸಿ ಬರುವವರಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದೂ ಹೇಳಿದ್ದಾರೆ.
ರಾಜ್ಯದಲ್ಲಿ ಈ ಹಿಂದಿದ್ದ ಸರ್ಕಾರ ಬೆಟ್ಟದ ಮೇಲೆ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ ಪರಿಣಾಮ, ಯಾತ್ರಾಸ್ಥಳ ಎನಿಸಿದ್ದ ಬೆಟ್ಟ ವಾಣಿಜ್ಯ ಕೇಂದ್ರವಾಗಿಬಿಟ್ಟಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಟ್ಟದ ಜನಸಂಖ್ಯೆ ಈಗ 4 ಸಾವಿರ ದಾಟಿದೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಿ ಮೈಸೂರು ನಗರದಲ್ಲಿ ಪುನರ್ವಸತಿ ಕಲ್ಪಿಸಬೇಕು. ಆರ್ಚಕರು, ದೇವಸ್ಥಾನದ ಸಿಬ್ಬಂದಿಗೆ ಮಾತ್ರ ಬೆಟ್ಟದಲ್ಲಿ ವಾಸಿಸಲು ಅವಕಾಶ ನೀಡಬೇಕು ಎಂದು ಬೈರಪ್ಪ ತಾವು ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

