ಮೈಸೂರು: ಮೈಸೂರಿನ ಪುರಾಣ ಪ್ರಸಿದ್ದ ಚಾಮುಂಡಿಬೆಟ್ಟದಲ್ಲಿ ಭೂಕುಸಿತವಾಗಿರುವ ಬಗ್ಗೆ ತಜ್ಞರ ಸಲಹೆ ಪಡೆದು ಮತ್ತೆ ಮತ್ತೆ ಭೂ ಕುಸಿತವಾಗದಂತೆ ಶಾಶ್ವತ ಪರಿಹಾರ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಗುರವಾರ ಪ್ರತಿಭಟನೆ ನಡೆಸಿದ ನಂತರ ಚಾಮುಂಡಿ ಬೆಟ್ಟವನ್ನು ಸಂರಕ್ಷಿಸಿ- ಭೂ ಕುಸಿತದಿಂದ ಉಳಿಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪುರಾಣಪ್ರಸಿದ್ಧವಾದ, ಮೈಸೂರು ರಾಜಮನೆತನದ ಅಧಿದೇವತೆ ತಾಯಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಪದೇಪದೇ ಭೂ ಕುಸಿತವಾಗುತ್ತಿದೆ. ಇದಕ್ಕೆ ಹಿಂದಿನ ರಾಜ್ಯಸರ್ಕಾರಗಳು ಹಾಗೂ ಕೆಲವು ರಾಜಕೀಯ ನಾಯಕರುಗಳು ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟವನ್ನು ನಾಶಗೊಳಿಸುವ ಕೆಲಸ ಮಾಡುತ್ತಿರುವುದು ಕಾರಣ ಎಂದು ಈ ವೇಳೆ ಪ್ರತಿ ಭಟನಾ ನಿರತರು ಆರೋಪಿಸಿದರು.
ಅವೈಜ್ಞಾನಿಕವಾಗಿ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು, ಬಹುಮಾಡಿ ಪಾರ್ಕಿಂಗ್ ಕಾಮಗಾರಿಗಳನ್ನು ನಿರ್ಮಾಣ ಮಾಡಿ, ಹಿಂದೆಂದೂ ಆಗದಂತಹ ಭೂ ಕುಸಿತಕ್ಕೆ ಕಾರಣವಾಗಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಚಾಮುಂಡಿಬೆಟ್ಟ ಕಾಂಕ್ರೀಟ್ ಕಾಡಾಗದಿರಲಿ & ವಾಣಿಜ್ಯ ಕೇಂದ್ರವಾಗದಿರಲಿ. ಜನ ಇಲ್ಲಿಗೆ ಬರುವುದು ಆಧ್ಯಾತ್ಮ ಹಾಗೂ ಮನಸ್ಸಿನ ನೆಮ್ಮದಿ ಬಯಸಿ ಎಂದು ಗಮನಸೆಳೆದರು.
ಮಲೆನಾಡಿನಲ್ಲಿ ಸಹ ಅವೈಜ್ಞಾನಿಕವಾಗಿ ಬೆಟ್ಟಗುಡ್ಡಗಳನ್ನು ಕೊರೆದು, ಹಣದಾಸೆಗಾಗಿ ರೆಸಾರ್ಟ್, ಹೋಟೆಲ್ ಗಳನ್ನು ನಿರ್ಮಿಸಿ ಭೂಮಿ ಸಡಿಲಗೊಳಿಸಿದ್ದರಿಂದಾಗಿ ಕಳೆದೆರಡು ವರ್ಷಗಳ ಹಿಂದೆ ಭಾರೀ ಭೂಕುಸಿತ ಉಂಟಾಗಿ ಅಪಾರ ಆಸ್ತಿಪಾಸ್ತಿ, ಭೂಮಿ ನಷ್ಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಹೇಳಿದರು.
ವಿಶ್ವವಿಖ್ಯಾತ ಚಾಮುಂಡಿ ಬೆಟ್ಟ ದೇಶದ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಇದನ್ನು ರಾಜ್ಯ ಸರ್ಕಾರ ” ಧಾರ್ಮಿಕ ಕ್ಷೇತ್ರ “ವನ್ನಾಗಿಯೇ ಉಳಿಸಬೇಕು. ಇನ್ನು ಮುಂದೆ ಯಾವುದೇ ದೊಡ್ಡ ದೊಡ್ಡ ಕಟ್ಟಡ ಕಾಮಗಾರಿಗಳು, ರಸ್ತೆ ಅಗಲೀಕರಣ ಮುಂತಾದ ಅವೈಜ್ಞಾನಿಕ ಅಭಿವೃದ್ಧಿಗೆ ಹಾಗೂ ಗಿಡಮರಗಳನ್ನು ಕೆಡವುವುದಕ್ಕೆ ಮುಂದಾಗಬಾರದು ಒಂದು ವೇಳೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಾ. ಶಾಂತರಾಜೇ ಅರಸ್ ಪಿ, ವಿಜಯೇಂದ್ರ, ಪ್ರಜೀಶ್.ಪಿ, ಡಾ. ಮೊಗಣ್ಣಾಚಾರ್, ಮಂಜುನಾಥ್, ಎಳನೀರು ರಾಮಣ್ಣ, ದರ್ಶನ್ ಗೌಡ, ನಂದಕುಮಾರ್, ಬಂಗಾರಪ್ಪ, ರಾಧಾಕೃಷ್ಣ, ಮಹದೇವ ಸ್ವಾಮಿ, ರಾಮನಾಯ್ಕ, ಗೊರೂರು ಮಲ್ಲೇಶ್, ಗುಂಡ್ಲುಪೇಟೆ ಸಂತೋಷ್, ಗಣೇಶ್ ಪ್ರಸಾದ್, ರವಿ ನಾಯಕ್, ರಮೇಶ್ ಟಿ, ಭರತ್ ಡೀನ್, ದೂರಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

