ಗುಜರಾತ್ ರಾಜ್ಯಕ್ಕೆ ಇಸ್ರೋ ವರ್ಗಾವಣೆಗೆ ಡಿಕೆಶಿ ವಿರೋಧ

ಬೆಂಗಳೂರು: ಗುಜರಾತ್ ರಾಜ್ಯಕ್ಕೆ ಇಸ್ರೋ ಸಂಸ್ಥೆ ವರ್ಗಾಯಿಸುವುದನ್ನು ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಸಂಜಯ ನಗರದಲ್ಲಿರುವ ಇಸ್ರೋ ಕೇಂದ್ರ ಕಛೇರಿ ಎದುರು ಎನ್.ಎಸ್.ಯು.ಐ.ವಿದ್ಯಾರ್ಥಿ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಇಸ್ರೋ ಕೇಂದ್ರ ಗುಜರಾತ್ ರಾಜ್ಯಕ್ಕೆ ವರ್ಗಾಯಿಸುವುದನ್ನು ಖಂಡಿಸಿದರು.

ಈ ಸಂದರ್ಭದಲ್ಲಿ  ಡಿ.ಕೆ.ಶಿವಕುಮಾರ್  ಮಾತನಾಡಿ ನಮ್ಮ ಹಿರಿಯರು ಕಟ್ಟಿ ಬೆಳಸಿದ ಹಲವಾರು ಸಂಸ್ಥೆಗಳನ್ನು ಬಿ.ಜೆ.ಪಿ.ನೇತೃತ್ವದ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿದೆ ಎಂದು ದೂರಿದರು.

ಬೆಂಗಳೂರಿನಲ್ಲಿನ ಉತ್ತಮ ಹವಮಾನ, ಒಳ್ಳೆಯ ಪರಿಸರದ ಕಾರಣದಿಂದ ಇಸ್ರೋ ಸಂಸ್ಥೆ ಸ್ಥಾಪಿಸಲಾಯಿತು. .ಅದರೆ ಈಗ ಗುಜರಾತ್ ರಾಜ್ಯಕ್ಕೆ ಇಸ್ರೋ ಸಂಸ್ಥೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ ಇದಕ್ಕೆ ಅವಕಾಶ ಕೊಡುವುದಿಲ್ಲ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯದ  ಭಾರತೀಯ ಜನತಾ ಪಕ್ಷದ 25 ಲೋಕ ಸಭಾ ಸದಸ್ಯರು ಹಾಗೂ 12 ರಾಜ್ಯ ಸಭಾ ಸದಸ್ಯರು ಪ್ರಧಾನಿ ಮೋದಿ ಅವರ ಬಳಿ ನಿಯೋಗ ತೆರಳಿ ಇಸ್ರೋ ಸಂಸ್ಥೆ ಇಲ್ಲಿಯೆ ಉಳಿಯುವಂತೆ ಮಾಡಬೇಕು ಎಂದು ಡಿಕೆಶಿ ಒತ್ತಾಯಿಸಿದರು.

ಪ್ರಧಾನಿ ನರೇಂದ್ರಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಇಸ್ರೋ ಸಂಸ್ಥೆ ಬೆಂಗಳೂರಿನಲ್ಲಿಯೇ ಉಳಿಯುವಂತೆ ನಮ್ಮ ಪಕ್ಷದ ವತಿಯಿಂದ ಮನವಿ ಮಾಡುತ್ತೇವೆ. ಒಂದು ವೇಳೆ ವರ್ಗಾವಣೆಯಾದರೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.