ಮೇಲ್ಮನೆ ಚುನಾವಣೆ ಮೈತ್ರಿ ವಿಚಾರ ಭಾನುವಾರದೊಳಗೆ ನಿರ್ಧಾರ:ಎಚ್.ಡಿ.ಕೆ

ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷವು ಯಾವ ಪಕ್ಷಕ್ಕಾದರೂ ಬೆಂಬಲ ನೀಡಬೇಕೆ-ಬೇಡವೇ ಎಂಬುದನ್ನು ಭಾನುವಾರದೊಳಗೆ ತೀರ್ಮಾನ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮೇಲ್ಮನೆ ಚುನಾವಣೆ ನಿಮಿತ್ತ ಕೋಲಾರ ಜಿಲ್ಲೆಯಲ್ಲಿ ಶುಕ್ರವಾರ ದಿಂದ ಪ್ರಚಾರ ಕೈಗೊಂಡಿದ್ದು, ಮುಳಬಾಗಿಲಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

ಬಿಜೆಪಿ ನಾಯಕರು ನಮ್ಮ ಬೆಂಬಲ ಕೇಳಿರುವುದು ನಿಜ. ಇನ್ನೆರಡು ದಿನದಲ್ಲಿ ಪಕ್ಷದ ಅಭಿಪ್ರಾಯ ಹೇಳುವುದಾಗಿ ನಾನು ಹೇಳಿದ್ದೇನೆ. ಇನ್ನೂ ಸಮಯ ಇದೆ, ಆತುರವೇನೂ ಇಲ್ಲ ಎಂದರು.

2023ರ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ ಇದೆ. ಅದಕ್ಕಾಗಿ ಸ್ಥಳೀಯವಾಗಿಯೇ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳಬೇಕೋ ಎಂಬ ನಿರ್ದೇಶನವನ್ನು ನಾಳೆ ಅಥವಾ ನಾಡಿದ್ದರಲ್ಲಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಒಂದು ಕಡೆ ನಮ್ಮ ಬೆಂಬಲ ಕೇಳುತ್ತದೆ. ಇನ್ನೊಂದು ಕಡೆ ಜೆಡಿಎಸ್ ಮುಗಿಸಲು ಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಪಕ್ಷವನ್ನು ಸಂಪೂರ್ಣ ನಾಶ ಮಾಡಬೇಕೆಂದು ಎರಡೂ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಇದೆಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನತೆಯಿಂದಲೇ ಇದೆಲ್ಲಕ್ಕೂ ಉತ್ತರ ದೊರೆಯಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಚುನಾವಣೆಗಳನ್ನು ಹೇಗೆ ಗೆಲ್ಲಬೇಕು ಎಂಬುದು ಬಿಜೆಪಿಗೆ ಚೆನ್ನಾಗಿ ಕರಗತವಾಗಿದೆ. ಹಣದಿಂದ ಗೆಲುವು ಸಾಧಿಸುವುದು ಹೇಗೆ ಎಂಬುದು ಆ ಪಕ್ಷಕ್ಕೆ ಚೆನ್ನಾಗಿ ತಿಳಿದಿದೆ. ರಾಜ್ಯದ ಹಣ ಲೂಟಿ ಮಾಡಿ ಆ ಪಕ್ಷ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಆರೋಪಿಸಿದರು.

ಚಿಹ್ನೆಯ ಮೇಲೆ ಈ ಚುನಾವಣೆ ನಡೆಯಲ್ಲ. ಕೋಲಾರ-ಚಿಕ್ಕಬಳ್ಳಾಪುರ ಸೇರಿ ನಾವು ಸ್ಪರ್ಧೆ ಮಾಡಿರುವ ಆರೂ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ತ್ರಿಕೋನ ಸ್ಪರ್ಧೆ ಇದೆ. ಈ ಚುನಾವಣೆಯಲ್ಲಿ ಹಣಕ್ಕಿಂತ ಹೆಚ್ಚಾಗಿ ಸ್ಥಳೀಯವಾಗಿರುವ ರಾಜಕೀಯ ಬೆಳವಣಿಗೆಗಳು ಪ್ರಭಾವ ಬೀರಲಿವೆ. ಹೀಗಿದ್ದರೂ ಚುನಾವಣೆ ಎಂದ ಕೂಡಲೇ ಕಾಂಗ್ರೆಸ್ ನಾಯಕರೊಬ್ಬರು ಜೆಡಿಎಸ್ ಪಕ್ಷಕ್ಕೆ ಸರ್ಟಿಫಿಕೇಟ್ ಕೊಡಲು ಮುಂದಾಗುತ್ತಾರೆ.

ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಅಂತಾರೆ, ಮತ್ತೆ ನಮ್ಮ ಮನೆ ಬಾಗಿಲಿಗೇ ಬಂದು ನಿಂತ್ಕೊಂಡು, ಬನ್ನಿ ಸರಕಾರ ಮಾಡೋಣ ಅಂತ ಕರೀತಾರೆ. ಕಾಂಗ್ರೆಸ್ ಪಕ್ಷದ ನಾಯಕರ ನಡವಳಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ನಾಡಿನ ಜನರ ವಿವೇಚನೆಗೆ ಬಿಡುತ್ತೇನೆ ಎಂದರು.

ರಾಜ್ಯದಲ್ಲಿ ಓಮಿಕ್ರಾನ್ ಬಗ್ಗೆ ಈಗಾಗಲೇ ಸರಕಾರದ ಗಮನ ಸೆಳೆದಿದ್ದೇನೆ. ನಿನ್ನೆಯೂ ಈ ಬಗ್ಗೆ ಮಾತನಾಡಿದ್ದೇನೆ. ಕೇವಲ ಸಭೆ ಮಾಡಿದರೆ ಉಪಯೋಗವಿಲ್ಲ. ಎರಡನೇ ಅಲೆಯಲ್ಲಿ ಉಂಟಾದ ಪ್ರಾಣಹಾನಿ ಈ ಬಾರಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.