ಮೈಸೂರು: ಹೇಳೀಕೇಳೀ ಇದು ರಂಗಭೂಮಿ. ಹಾಗಾಗಿ ಇಲ್ಲಿ ಎಲ್ಲರೂ ಬೇಕು, ಯಾರೂ ಕೂಡಾ ರಂಗಾಯಣಕ್ಕೆ ಕಪ್ಪುಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಸೂಚ್ಯವಾಗಿ ಹೇಳಿದ್ದಾರೆ.
ರಂಗಾಯಣ ಸರ್ಕಾರಿ ಅನುದಾನಿತ ಸ್ವಾಯತ್ತ ಸಂಸ್ಥೆಯಾಗಿದೆ. ಅನವಶಕ್ಯವಾಗಿ ಮೂಗು ತೂರಿಸುವ ಹಕ್ಕನ್ನು ಯಾರಿಗೂ ಕೊಟ್ಟಿಲ್ಲ. ಆಯಾ ಸರ್ಕಾರಕ್ಕೆ ಯಾರು ಬೇಕೋ ಅವರನ್ನು ರಂಗಾಯಣಕ್ಕೆ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಇದುವರೆಗೆ ಬಿ.ಬಿ. ಕಾರಂತ ಮತ್ತು ರಾಜಾರಾಂ ಬಿಟ್ಟರೆ ಇಲ್ಲಿಗೆ ನೇಮಕಾವಾದ ನಿರ್ದೇಶಕರೆಲ್ಲರೂ ಎಡಪಂಥೀಯ ಚಿಂತನೆಯವರೇ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವಿದೇಶದಲ್ಲಿ ಮೃತಪಟ್ಟಾಗ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ರಂಗಾಯಣ ನಿರ್ದೇಶಕರೊಬ್ಬರು ರಂಗಾಯಣದ ಭೂಮಿಗೀತದಲ್ಲಿ ಏರ್ಪಾಡು ಮಾಡಿದ್ದರು. ಆತ ಯಾವ ಕಲಾವಿದನೂ ಆಗಿರಲಿಲ್ಲ, ಜತೆಗೆ ಕಲಾ ರಸಿಕನೂ ಆಗಿರಲಿಲ್ಲ ಹಾಗಿದ್ದರೂ ಅದರ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ ಎಂದು ತಿಳಿಸಿದ್ದಾರೆ.
20 ವರ್ಷಗಳ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಆಹ್ವಾನಿಸಲಾದ ಅತಿಥಿಗಳಲ್ಲಿ ಶೇ.90 ರಷ್ಟು ಮಂದಿ ಎಡಪಂಥೀಯ ಸಾಹಿತಿಗಳು, ಚಿಂತಕರು, ರಾಜಕಾರಣಿಗಳೆ ಆಗಿದಗದಾರೆ. ರಂಗಾಯಣದ ಹೆಬ್ಬಾಗಿಲಿನೊಳಗೆ ಬಲಪಂಥೀಯ ಚಿಂತಕ, ಸಾಹಿತಿಯೊಬ್ಬರನ್ನೂ ಬಿಟ್ಟುಕೊಟ್ಟಿಲ್ಲ . ಮೈಸೂರಿನಲ್ಲೇ ಇರುವ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಇದೇ ಕಾರಣಕ್ಕೆ ಕರೆದಿರಲಿಲ್ಲ ಎಂಬುದನ್ನು ದಯವಿಟ್ಟು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಕಾರ್ಯಪ್ಪ ತಿಳಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದ ನಾನೆಂದೂ ಎಡಪಂಥೀಯರನ್ನು ಅಗೌರವದಿಂದ ನೋಡಿಲ್ಲ. ಸಂಘ ಸಂಸ್ಕಾರ ಕಲಿಸಿದೆ. ರಂಗಭೂಮಿಗೆ ಎಲ್ಲರೂ ಬೇಕು ಎಂಬುದು ನನ್ನ ಆಶಯ, ಯಾರೂ ಏನೇ ತಿಪ್ಪರಲಾಗ ಹಾಕಿದರೂ ಸುಳ್ಳು ಪ್ರಚಾರ ಮಾಡಿದರೂ ಇಲ್ಲದ ಕ್ಯಾತೆ ತೆಗೆದರೂ ನನ್ನ ಸ್ಥೈರ್ಯ ಕುಗ್ಗುವುದಿಲ್ಲ ನನ್ನ ಮನೆಯ ಹೆಸರೇ ರಂಗಭೂಮಿ, ಸ್ವಚ್ಛ ಮನಸ್ಸಿನವರಿಗೆ ರಂಗಾಯಣದ ಬಾಗಿಲು ಸದಾ ತೆರೆದಿರುತ್ತದೆ ಎಂದಿದ್ದಾರೆ.

