ಬೆಳಗಾವಿ: ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವೈಫಲವಾಗಿದೆ, ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಳಗಾವಿಯ ಹನಗೋಳಕ್ಕೆ ಭೇಟಿ ನೀಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಖಂಡನೀಯ. ಎಂಇಎಸ್‍ನ ಪುಂಡರಿಗೆ ಕಾನೂನು ಇಲ್ಲ. ಯಾವ ನಿಯಮಗಳೂ ಇಲ್ಲ. ಆ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಜನರು ಒತ್ತಾಯ ಮಾಡಲು ಆರಂಭಿಸಿದ್ದಾರೆ. ನಾವು ಈ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಧಿಕಾರಿಗಳು ಸಚಿವರು, ಮುಖ್ಯಮಂತ್ರಿಗಳ ಮಾತು ಕೇಳುತ್ತಿಲ್ಲ. ಆಡಳಿತದ ಮೇಲೆ ಹಿಡಿತ ಇಲ್ಲವಾಗಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಕೂಡ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.
ಸಂಗೊಳ್ಳಿ ರಾಯಣ್ಣ ಒಂದು ಜಾತಿಗೆ ಸೀಮಿತವಾದ ನಾಯಕರಲ್ಲ. ಅವರ ಪ್ರತಿಮೆಯನ್ನು ಭಗ್ನಗೊಳಿಸುರುವವರದು ವಿಕೃತ ಮನೋಭಾವ. ಎಂಇಎಸ್‍ನ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಅವರು ಬಹಿರಂಗವಾಗಿ ಆಯುಧಗಳನ್ನು ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ. ಯಾವುದೇ ಭಯ ಇಲ್ಲವಾಗಿದೆ ಇದಕ್ಕೆ ಕಡಿವಾಣ ಅಹತ್ಯ ಎಂದರು.
ಈಗ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗಿಳಿದಿವೆ. ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಅನ್ಯಾಯದ ವಿರುದ್ದ ಪ್ರತಿಭಟಿಸುವವರನ್ನು ತಡೆಯಬಾರದು ಎಂದು ಸಿದ್ದು ಹೇಳಿದರು.

