ಕನ್ನಡ ದ್ರೋಹಿ ಸಂಘಟನೆ ನಿಷೇಧಿಸಿ -ಕುಮಾರಸ್ವಾಮಿ ಒತ್ತಾಯ

ಬೆಂಗಳೂರು: ಮಧ್ಯರಾತ್ರಿಯಲ್ಲಿ ಬಂದು ಕನ್ನಡಿಗರ ಹೆಮ್ಮೆಯ ಪುತ್ರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮಾಡಿರುವ, ವಾಹನಗಳ ಮೇಲೆ ಕಲ್ಲು ಹೊಡೆದು ಬೆಂಕಿ ಇಟ್ಟಿರುವ ನಾಡದ್ರೋಹಿಗಳನ್ನು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ  ಮಾತನಾಡಿದ ಅವರು ಘಟನೆಯಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸ್ವಾತಂತ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪ ಮಾಡಿರುವುದು ಹೇಯ ಕೃತ್ಯ. ಈ ಮೂಲಕ ಕಿಡಿಗೇಡಿಗಳು ಕನ್ನಡಿಗರಿಗೆ ಮಾತ್ರವಲ್ಲ ಮರಾಠಿಗರಿಗೆ ಕೂಡ ದ್ರೋಹ ಎಸಗಿದ್ದಾರೆ. ಓರ್ವ ರಾಷ್ಟ್ರಪ್ರೇಮಿ, ಮಹಾನ್ ಯೋಧನಿಗೆ ಆಗಿರುವ ಈ ಅಪಚಾರದಿಂದ ಎಲ್ಲರೂ ತಲೆತಗ್ಗಿಸುವಂತೆ ಆಗಿದೆ ಎಂದರು.

ಈ ಕೃತ್ಯದಲ್ಲಿ ಯಾವುದೇ ಸಂಘಟನೆಗಳು ಭಾಗಿಯಾಗಿದ್ದರೂ ಅವುಗಳನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಹಾಗೂ ತಪ್ಪಿತಸ್ಥರನ್ನು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಕುಮಾರಸ್ವಾಮಿ  ಒತ್ತಾಯಿಸಿದರು.

ಈ ಘಟನೆಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಹೊರಗೆಳೆದು, ಷಡ್ಯಂತ್ರ ನಡೆಸಿದ ಎಲ್ಲರಿಗೂ ತಕ್ಕ ಶಾಸ್ತಿ ಮಾಡಬೇಕು ಎಂದರು.

ಎಂಇಎಸ್ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ  ಮೃದು ಧೋರಣೆ ಅನುಸರಿಸುತ್ತಿವೆ ಎಂದು ಜನ ದೂರುತ್ತಿದ್ದಾರಲ್ಲ ಎಂದು ಮಾಧ್ಯಮಗಳು ಗಮನ ಸೆಳೆದಾಗ ಯಾರ ಮೇಲೆ ಯಾರಿಗೆ ಮೃದು ಧೋರಣೆ ಇದೆ ಎನ್ನುವುದಕ್ಕಿಂತ ನಮ್ಮ ನೆಲದಲ್ಲೇ ಇದ್ದು, ಇಲ್ಲಿನ ನೀರು, ಗಾಳಿ, ಅನ್ನ ಸೇವಿಸುತ್ತಾ ನಮ್ಮ ನಾಡಿನ ಬಗ್ಗೆ ದ್ರೋಹ  ಮಾಡುವುದು ಘೋರ ಅಪರಾಧ. ಇದಕ್ಕೆ ಕ್ಷಮೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಎರಡು ರಾಜ್ಯಗಳ ನಡುವೆ ದ್ವೇಷವನ್ನು ಬಿತ್ತಿ ಸಾಮರಸ್ಯ ಹಾಳು ಮಾಡುವಂತ ವಿಚ್ಛಿದ್ರ ಶಕ್ತಿಗಳಿಗೆ ಬೆಂಬಲ ಕೊಟ್ಟು ನಿಮ್ಮ ರಾಜಕೀಯ ಶಕ್ತಿ ವೃದ್ಧಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಪರಸ್ಪರ ಸಹೋದರ ಭಾವದಿಂದ ಕೆಲಸ ಮಾಡಬೇಕು. ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುವಂತ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು  ಆಗ್ರಹಪಡಿಸಿದರು.

ಸಿಎಂ ಭಾವನಾತ್ಮಕ ಹೇಳಿಕೆ ತಪ್ಪೇನಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರದಲ್ಲಿ ತಮ್ಮ ಅಧಿಕಾರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿರುವ ಬಗ್ಗೆ ನಾನು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ  ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.

ಶಿಗ್ಗಾಂವಿಯಲ್ಲಿ ಅವರು ನಾಲ್ಕು ಚುನಾವಣೆಗಳನ್ನು ಸತತವಾಗಿ ಗೆದ್ದಿದ್ದಾರೆ. ಜನ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಭಾವನೆಗಳು ಸಹಜ. ಭಾವನಾತ್ಮಕ ವ್ಯಕ್ತಿಗಳಿಗೆ ಮಾತ್ರ ಅದು ಅರ್ಥವಾಗುತ್ತದೆ. ಆ ಸ್ಥಾನಕ್ಕೆ ಅವರು ಬರಬೇಕಾದರೆ ಆ ಕ್ಷೇತ್ರದ ಜನರೇ ಕಾರಣ. ಹೀಗಾಗಿ ಸಿಎಂ ಅವರು ಭಾವನಾತ್ಮಕವಾಗಿ ಮಾತನಾಡಿರಬಹುದು. ಅದರಲ್ಲಿ ತಪ್ಪೇನಿಲ್ಲ ಎಂದರು.

ನನ್ನ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ನಾನು ಅನೇಕ ಸಲ ಹೇಳಿದ್ದೇನೆ, ನನಗೆ ರಾಜಕೀಯ ಜನ್ಮ ಕೊಟ್ಟವರು ರಾಮನಗರದ ಜನ ಅಂತ. ಅವರ ಬಗ್ಗೆ ಹೇಳುವಾಗ ನಾನೂ ಭಾವುಕನಾಗಿದ್ದೇನೆ. ಇದು ಮನುಷ್ಯ ಸಹಜ ಗುಣ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಬದಲಾವಣೆ ಆಗುತ್ತೆ ಅಂತ ಬೊಮ್ಮಾಯಿ ಅವರು ಹೀಗೆ ಮಾತನಾಡಿದ್ದಾರೆ ಎನ್ನುವುದನ್ನು ನಾನು ಒಪ್ಪಲು ತಯಾರಿಲ್ಲ ಎಂದರು.