ಸಂಕಷ್ಟದ ವರ್ಷಗಳಲ್ಲಿ ಮೇಕೆದಾಟು ಯೋಜನೆ ಅನುಕೂಲ -ಬೊಮ್ಮಾಯಿ

ಬೆಳಗಾವಿ:ಸಂಕಷ್ಟದ ವರ್ಷಗಳಲ್ಲಿ ಮೇಕೆದಾಟು ಯೋಜನೆ ಅನುಕೂಲವಾಗುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರವರಿಗೆ ಶಾಸಕ ಶರತ್ ಬಚ್ಚೇಗೌಡ  ಕೇಳಿದ ಪ್ರಶ್ನೆಗೆ ಉತ್ತರ ನೀಡುವ ವೇಳೆ ಸಿಎಂ ಮಧ್ಯ ಪ್ರವೇಶಿಸಿ ಮಾತನಾಡಿದರು.

ಕಾವೇರಿ ಕಣಿವೆಯಲ್ಲಿ ಸಂಕಷ್ಟದ ವರ್ಷಗಳಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಮೇಕೆದಾಟು ಯೋಜನೆ ಕಲ್ಪಿಸಿ  ಅನುಷ್ಟಾನಗೊಳಿಸುವತ್ತ ದಾಪುಗಾಲಿಡಲಾಗುತ್ತಿದೆ ಎಂದರು.

ಹೆಚ್ಚುವರಿ ನೀರು ಲಭ್ಯವಾದಾಗ ಅದನ್ನು ಹಿಡಿದಿಟ್ಟುಕೊಂಡು ಕೊರತೆ ಸಂದರ್ಭದಲ್ಲಿ ಬಳಸಿಕೊಳ್ಳುವ ಮೂಲಕ ಎರಡೂ ರಾಜ್ಯಗಳಿಗೂ ಸಂಕಷ್ಟದವೇಳೆ ಅನುಕೂಲವಾಗುವ ಉದಾತ್ತ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ಕಾವೇರಿ ಜಲ ವಿವಾದ ನ್ಯಾಯಾಧೀಕರಣ ನೀಡಿದ ಐತೀರ್ಪಿನಂತೆ ಎರಡೂ ರಾಜ್ಯಗಳ ಪಾಲಿನ ಹಂಚಿಕೆಯ ವ್ಯಾಪ್ತಿಯೊಳಗೆ ಮೇಕೆದಾಟು ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವರು ಉತ್ತರಿಸಿದರು.

ತಮಿಳುನಾಡಿನ ಹಸಿರು ಪೀಠ ನೀಡಿದ್ದ ತಡೆಯಾಜ್ಞೆಯನ್ನು ದೆಹಲಿ ಹಸಿರುಪೀಠ ತೆರವುಗಳಿಸಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ನಂತರ ಶಾಸಕರಿಗೆ ಒದಗಿಸುವದಾಗಿ ವಿವರಿಸಿದರು.