ಬೆಳಗಾವಿ:ಮತಾಂತರ ನಿಷೇಧ ಕಾಯ್ದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ. ಈ ಕಾಯ್ದೆ ಮಂಡನೆಗೆ ನಾವು ವಿರೋಧ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಆಡಳಿತ ಪಕ್ಷ ಮತಾಂತರ ನಿಷೇಧ ಕಾಯ್ದೆಯನ್ನು ಮಂಡನೆ ಮಾಡಲಿದ್ದು, ಇದನ್ನು ನಮ್ಮ ಪಕ್ಷ ವಿರೋಧಿಸಲಿದೆ ಎಂದು ಹೇಳಿದರು.
ಸರ್ಕಾರದವರು ರಾಜ್ಯದಲ್ಲಿ ಅಶಾಂತಿ ಮೂಡಿಸಲು ಮತಾಂತರ ನಿಷೇಧ ಕಾಯ್ದೆ ತರುತ್ತಿದ್ದಾರೆ. ಸಂವಿಧಾನದ ವಿರುದ್ಧವಾಗಿ ಇದನ್ನು ತೆಗೆದುಕೊಳ್ಳಲಾಗಿದೆ. ಮಾನಸಿಕವಾಗಿ ಕ್ರೈಸ್ತರಿಗೆ ಹಿಂಸೆ ಕೊಡುವ ಕೆಲಸವಿದು ಎಂದು ವಾಗ್ದಾಳಿ ನಡೆಸಿದರು.
ಕಾಯ್ದೆ ಜಾರಿಯಾದರೆ ಹೂಡಿಕೆ ಮಾಡುವವರು ಬರಲ್ಲ. ಇದು ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಲಿದೆ. ನಾಡಿನಲ್ಲಿ ಮೊಘಲರು, ಬ್ರಿಟೀಷರ ಆಳ್ವಿಕೆಯಿತ್ತು. ಆಗ ಎಲ್ಲಿ ಮತಾಂತರವಾಯಿತು ಎಂದು ಡಿಕೆಶಿ ಪ್ರಶ್ನಿಸಿದರು.

