ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಸ್ಥಾಪನೆ; ಸ್ಥಳ ಪರಿಶೀಲನೆ ನಡೆಸಿದ ಅರಗ ಜ್ಞಾನೇಂದ್ರ

ಬೆಳಗಾವಿ: ಎಂಇಎಸ್ ಪುಂಡರ ಹಾವಳಿಯಿಂದ ಆನಗೋಳದಲ್ಲಿ ಹಾನಿಯಾಗಿದ್ದ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆಯನ್ನು ಮರು ಪ್ರತಿಷ್ಠಾಪಿಸಲಾಗುತ್ತಿದ್ದು  ಮಂಗಳವಾರ ಗೃಹ ಸಚಿವ ಅರಗ ಜ್ಞಾನೇಂದ್ರ  ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಎಂಇಎಸ್ ಪುಂಡರ ಮೇಲೆ ನಾವು ತೀವ್ರವಾದ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಬಸವಣ್ಣ, ಶಿವಾಜಿ, ರಾಯಣ್ಣ ಅವರಂತಹ ಮಹಾನ್ ವ್ಯಕ್ತಿಗಳ ಪ್ರತಿಮೆಯನ್ನು ಹಾನಿ ಮಾಡುವುದು ದೇಶ ದ್ರೋಹದ ಕೆಲಸ ಎಂದು ಕಿಡಿಕಾರಿದರು.

ರಾಯಣ್ಣ  ಪ್ರತಿಮೆ ಹಾನಿಯಿಂದ ಉಂಟಾದ ಸಂಘರ್ಷದಿಂದ ಜನರ ಶಾಂತಿಗೆ ಭಂಗಬಾರದ ರೀತಿಯಲ್ಲಿ ಬಂದೋಬಸ್ತ್  ಮಾಡಿದ್ದೇವೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರದೊಂದಿಗೆ ನಾವು ಮಾತನಾಡಿದ್ದೇವೆ, ಅಲ್ಲಿರುವ ಕನ್ನಡಿಗರ ಆಸ್ತಿ ರಕ್ಷಣೆ ಮತ್ತು ಅವರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಅರಗ ಜ್ಞಾನೇಂದ್ರ ತಿಳಿಸಿದರು.

41 ಜನರನ್ನು ಬೆಳಗಾವಿಯಲ್ಲಿ ಮತ್ತು ಶಿವಾಜಿ ಪ್ರತಿಮೆಗೆ ಮಸೀ ಬಳಿದ 7 ಜನರನ್ನು ನಾವು ಈಗಾಗಲೇ ಆರೆಸ್ಟ್ ಮಾಡಿದ್ದೇವೆ, ಬಸವಣ್ಣನವರ ಭಾವಚಿತ್ರಕ್ಕೆ ಹಾನಿ ಮಾಡಿದವರನ್ನು ಸೋಮವಾರ ರಾತ್ರಿ ಬಂಧಿಸಿದ್ದೇವೆ ಎಂದು ತಿಳಿಸಿದರು. ಬೆಳಗಾವಿಯ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ  ಈ ರೀತಿ ಮಾಡಿದ್ದಾರೆ ಎಂದರೆ ಅದರ ಹಿಂದೆ ಯಾವುದೋ ಒಂದು ಸಂಚು ಅಡಗಿದೆ.  ಕಾಣದ ಕೈಗಳು ಇವೆಲ್ಲವನ್ನು ಮಾಡಿಸುತ್ತಿದೆ. ಅದರ ಬಗ್ಗೆ ತನಿಖೆ ಮಾಡಲು ನಾವು ಸೂಚಿಸಿದ್ದೇವೆ ಎಂದರು.