ಆಪರೇಷನ್ ಹಸ್ತಕ್ಕೆ ಜೆಡಿಎಸ್ ಜಗ್ಗಲ್ಲ ಸಿದ್ದುಗೆ ಎಚ್ ಡಿ ಕೆ ಟಾಂಗ್

ಬೆಳಗಾವಿ: ಜೆಡಿಎಸ್ ಮುಳುಗುವ ಪಕ್ಷವೇ ಅಥವಾ ತೇಲುವಾ ಪಕ್ಷವೇ? ಎಂಬುದನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಜನ ತೋರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 2023ರವರೆಗೆ ಸಿದ್ದ ಸೂತ್ರಧಾರನ ಆಪರೇಷನ್ ಹಸ್ತವೆಂಬ ಅಸಹ್ಯ ನಡೆಯಲಿ. ಅದಕ್ಕೆ ಎಷ್ಟೇ ಕೋನಗಳನ್ನು ಸೃಷ್ಟಿಸಿದರೂ ಜೆಡಿಎಸ್ ಜಗ್ಗುವುದಿಲ್ಲ ಎಂದಿದ್ದಾರೆ.

ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇರುವುದಿಲ್ಲ, ಸಿದ್ದಕಲೆಯ ನಿಷ್ಣಾತರಿಗೆ ಸುಳ್ಳೇ ದೇವರು, ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಸುಳ್ಳು ಹೇಳಿಕೊಂಡು ಓಡಾಡುವವರ ಭಜನೆ ಹೊಸದೇನೂ ಅಲ್ಲ ಎಂದು ಕಿಡಿಕಾರಿದರು.

ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವವರ ಕೃತಘ್ನತೆಗೆ ಇದು ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಈಗಿರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ಬ್ರೂಟಸ್ ಮನಃಸ್ಥಿತಿ ಎಂದು ಜರಿದಿದ್ದಾರೆ.

ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ ಆಪರೇಷನ್ ಕಮಲದಲ್ಲಿ ಕುಮ್ಮಕ್ಕಾಗಿ ಮೈತ್ರಿ ಸರಕಾರ ಕೆಡವಿದ ಸಿದ್ದಶೂರನ ಸಾರಥ್ಯದಲ್ಲಿ ಆಪರೇಷನ್ ಹಸ್ತ ನಡೆಯುತ್ತಿದೆ ಎಂದು ಎಚ್ ಡಿ ಕೆ ಆರೋಪಿಸಿದ್ದಾರೆ.

ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ನಮ್ಮ ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ಬ್ರೋಕರಪ್ಪನ ಕುತಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್, ಈಗ ಅಭಿನವ ಅರಸು ಎಂದು ಪುಂಗಿ ಬಿಡುವ ಸುಳ್ಳುಸಿದ್ದಪ್ಪನಿಗೆ ಶರಣಾಗಿದೆ. ಈ ವ್ಯಕ್ತಿಗೆ ಅರಸು ಹೆಸರೇಳುವ ಅರ್ಹತೆಯೇ ಇಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.