ಬೆಳಗಾವಿ:ಮತಾಂತರ ನಿಷೇಧ ಕಾಯ್ದೆ ಮಂಡಿಸುವ ಮೂಲಕ ರಾಜ್ಯ ಸರ್ಕಾರ ಬಸವಣ್ಣ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳಿಗೆ ಅಪಚಾರ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
12ನೆ ಶತಮಾನದಲ್ಲಿ ಎಲ್ಲ ಸಮುದಾಯಗಳಿಗೂ ಲಿಂಗಧಾರಣೆ ಮಾಡುವ ಮೂಲಕ ಬಸವಣ್ಣ ಸಮಾನತೆಯ ತತ್ವ ಸಾರಿದ್ದರು ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಬೌದ್ಧ ಧರ್ಮದ ಬಗ್ಗೆ ಪ್ರಚಾರ ಮಾಡಿದ್ದರು. ಆದರೆ, ಬಿಜೆಪಿಯವರು ಮತ್ತು ಸಿಎಂ ಬೊಮ್ಮಾಯಿ ಅವರು ಈ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕ್ರೈಸ್ತರು, ಮುಸಲ್ಮಾನರನ್ನು ಬೆದರಿಸುವ ಉದ್ದೇಶದಿಂದ ಈ ಕಾಯ್ದೆ ಮಂಡಿಸಲಾಗಿದೆ ಎಂದು ಡಿಕೆಶಿ ಆರೋಪಿಸಿದರು.
ಇದರಿಂದ ಹಲವು ಮಠಾಧೀಶರು ಆತಂಕಕ್ಕೆ ಒಳಗಾಗಿದ್ದಾರೆ. ನಾವು ಕೂಡ ಲಿಂಗಧಾರಣೆ ಮಾಡಿ ಧರ್ಮ ಪ್ರಚಾರ ಮಾಡುತ್ತೇವೆ. ಈ ಕಾನೂನು ಮುಂದಿಟ್ಟುಕೊಂಡು ನಾಳೆ ನಮ್ಮನ್ನೂ ಹೆದರಿಸಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಕ್ರೈಸ್ತ, ಮುಸಲ್ಮಾನ್ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಬಿಜೆಪಿಯವರು ಕೇಂದ್ರ ಸಚಿವರು, ರಾಜ್ಯ ಸಚಿವರುಗಳಿಂದ ಶಿಫಾರಸು ಪತ್ರಗಳನ್ನು ತಂದು ನಿಲ್ಲುತ್ತಾರೆ ಎಂದು ವ್ಯಂಗ್ಯ ವಾಡಿದರು.
ಇವರೆಲ್ಲರಿಗೂ ಸೆಂಟ್‍ಜಾನ್, ಕ್ರೈಸ್ಟ್ ಯೂನಿವರ್ಸಿಟಿ, ಬಾಲ್ಡ್ವಿನ್ ಶಿಕ್ಷಣ ಸಂಸ್ಥೆಗಳೇ ಬೇಕು. ಅಲ್ಲಿ ಸೀಟು ಕೊಡದೆ ಇದ್ದಾಗ ಹೆದರಿಸಲು ಈ ಕಾನೂನು ತಂದಿದ್ದಾರೆ ಎಂದು ಟೀಕಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ದಲಿತರು ಬೌದ್ಧಧರ್ಮ ಪ್ರಚಾರ ಮಾಡುತ್ತಾರೆ.ಸರ್ಕಾರ ವಿಧ್ವಂಸಕಾರಿ ಕಾನೂನು ಜಾರಿಗೆ ತಂದು ಸಾಮರಸ್ಯ ಹಾಳು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಂದಾಯ ಸಚಿವ ಆರ್.ಅಶೋಕ್ ನೆರೆ ಹಾವಳಿ ಬಗ್ಗೆ ನಡೆದ ಚರ್ಚೆಗೆ ನಿನ್ನೆ ಉತ್ತರ ನೀಡುತ್ತಿದ್ದರು.ಆಗ ಅದನ್ನು ಅರ್ಧಕ್ಕೇ ನಿಲ್ಲಿಸಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತಾಂತರ ನಿಷೇಧ ಕಾಯ್ದೆಗೆ ಅವಕಾಶ ಮಾಡಿಕೊಟ್ಟರು ಎಂದರು.
ಅವರು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿರುವುದು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು. ಆದರೆ, ಬಿಜೆಪಿಯ ನಾಯಕರಂತೆ ನಡೆದುಕೊಳ್ಳುತ್ತಿದ್ದಾರೆ.
ಅಗತ್ಯವಿದ್ದರೆ ಅವರು ತಮ್ಮ ಬಾವುಟವನ್ನು ಹಾಕಿಕೊಂಡು ಬೇರೆಡೆ ಕುಳಿತುಕೊಳ್ಳಲಿ ಎಂದು ಮೂದಲಿಸಿದರು.
ಸರ್ಕಾರ ಬಸವಣ್ಣನವರ
ತತ್ವಗಳಿಗೆ ದ್ರೋಹ ಮಾಡುತ್ತಿದೆ. ಪ್ರೀತಿಸಿ ಮದುವೆಯಾದವರನ್ನು ಧರ್ಮದ ಕಾರಣಕ್ಕಾಗಿ ಬೇರ್ಪಡಿಸಲು ಸಾಧ್ಯವೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

