ಬೆಳಗಾವಿ:ಮುಂದಿನ ದಿನಗಳಲ್ಲಿ ವಿಧಾನಸಭೆಯ ಅಧಿವೇಶನವನ್ನು ಹೆಚ್ಚು ಸಮಯ ನಡೆಸಲು ತೀರ್ಮಾನ ಮಾಡಲಾಗು ವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಿಸ್ತು ಹಾಗೂ ನಿಯಮಗಳ ಪಾಲನೆ ಕುರಿತು ನಡೆದ ಗಂಭೀರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಂಟಿ ಅಧಿವೇಶನ, ಬಜೆಟ್ ಅಧಿವೇಶನವನ್ನು ಹೆಚ್ಚು ದಿನಗಳ ಕಾಲ ನಡೆಸಲು ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದರು.
ಅಧಿವೇಶನವನ್ನು ವಿಸ್ತರಣೆ ಮಾಡಬೇಕು ಎಂದು ಹಲವು ಸದಸ್ಯರು ಹೇಳುತ್ತಾರೆ. ಒಂದು ವೇಳೆ ವಿಸ್ತರಣೆ ಮಾಡಿದರೆ ವಿಸ್ತರಣೆಗೆ ಬೇಡಿಕೆ ಇಟ್ಟವರೇ ಸದನದಲ್ಲಿ ಇರುವುದಿಲ್ಲ. ಅಂತಹ ನಿದರ್ಶನಗಳೂ ಇವೆ ಎಂಬುದನ್ನು ಸದನದ ಗಮನಕ್ಕೆ ತಂದರು.
ಸದನ ನಿಯಮಾವಳಿಗಳ ಪ್ರಕಾರ ನಡೆದರೆ ತೊಂದರೆಯಾಗುವುದಿಲ್ಲ. ಎರಡೂ ಸದನಗಳಿಗೂ ಪರಂಪರೆ ಇದೆ. ಸದನದಲ್ಲಿ ವಿರೋಧ ಪಕ್ಷಕ್ಕೆ ಆದ್ಯತೆ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆ. ಆಯಾ ಪಕ್ಷದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಸಮಯ ನಿಗದಿಪಡಿಸಿ ಪರಿಪಾಲನೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದರು
ಸದನದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಪುನರ್ ಪರಿಶೀಲಿಸಬೇಕು ಆಗ ಅವೇಶನ ಹೆಚ್ಚು ಫಲಪ್ರದವಾಗಲಿದೆ ಎಂದು ಸಿಎಂ ಹೇಳಿದರು.

