ಬೆಳಗಾವಿ: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರೇ ಮುಂದುವರಿಯಲಿದ್ದಾರೆ, ಸಚಿವ ಕೆ.ಎಸ್.ಈಶ್ವರಪ್ಪ ಅವರ ಭವಿಷ್ಯ ಸುಳ್ಳಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಮಾಡುವ ಪ್ರಸ್ತಾವನೆ ಹೈಕಮಾಂಡ್ ಮುಂದಿಲ್ಲ ಎಂದು ತಿಳಿಸಿದರು.
ಕೆಲವರು ಹಣ ಇಟ್ಟುಕೊಂಡು ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಈಗಾಗಲೆ ಮುಖ್ಯ ಮಂತ್ರಿ ಆದಂತೆ ಎಂಜಿ ರಸ್ತೆಯಲ್ಲಿ 3 ಲಕ್ಷದ ಸೂಟ್ ಹೊಲಿಸಿಕೊಂಡು ತಿರುಗಾಡುತ್ತಿದ್ದಾರೆ. ಅವರ ಆಸೆ ಈಡೇರುವುದಿಲ್ಲ ಎಂದು ಯಾರ ಹೆಸರೂ ಹೇಳದೆ ವಾಗ್ದಾಳಿ ನಡೆಸಿದರು.
ನಾಯಕತ್ವ ಬದಲಾವಣೆ ಮಾಡುವುದಾದರೆ ವರಿಷ್ಠರು ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತಾರೆ. ಪ್ರಧಾನಿ ಮೋದಿಯಂತವರ ಪ್ರಬಲ ನಾಯಕತ್ವ ಇರುವಾಗ ಹಣ ಇಟ್ಟುಕೊಂಡು ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ನಮ್ಮ ಹೈಕಮಾಂಡ್ ಅತ್ಯಂತ ಪ್ರಬಲವಾಗಿದೆ,ಕಾಂಗ್ರೆಸ್ ಹೈಕಮಾಂಡ್‍ನಂತೆ ದುಡ್ಡು ತೆಗೆದುಕೊಂಡು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿದರು.
ಪಕ್ಷ ನಿಷ್ಠೆ, ಅವರ ಹಿನ್ನೆಲೆ, ಚಾರಿತ್ರೆ ಎಲ್ಲವನ್ನೂ ಅಳೆದುತೂಗಿ ನಾಯಕತ್ವ ನೀಡುತ್ತಾರೆ. ಹಣ ಇದ್ದವರೆಲ್ಲ ನಮ್ಮಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.
ಭ್ರಷ್ಟರು, ಸುಳ್ಳು ಹೇಳುವವರು, ಶಾಸಕರಿಗೆ ಆಮಿಷವೊಡ್ಡುವವರು ಮುಖ್ಯಮಂತ್ರಿಯಾದರೆ ರಾಜ್ಯದ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಎಂದರು.
ಪ್ರಾಮಾಣಿಕರು, ಸಚ್ಚಾರಿತ್ರ್ಯವುಳ್ಳವರು ಸಿಎಂ ಆದರೆ ಸರ್ಕಾರ, ರಾಜ್ಯ ಮತ್ತು ಪಕ್ಷಕ್ಕೂ ಹೆಸರು ಬರುತ್ತದೆ.
ಒಂದು ವೇಳೆ ಅಂಥ ಭ್ರಷ್ಟರು ಸಿಎಂ ಸ್ಥಾನದಲ್ಲಿ ಕೂರುವುದಾದರೆ ಖಂಡಿತ ನಾನು ಮಂತ್ರಿಯಾಗುವುದಿಲ್ಲ ಎಂದು ಯತ್ನಾಳ್ ಶಪಥ ಮಾಡಿದರು.

