ಹಿಂದೂ ಧರ್ಮ ಉಳಿಯಲು ಮತಾಂತರ ನಿಷೇಧ ಕಾಯ್ದೆ‌ ಅಗತ್ಯ-ಯತ್ನಾಳ್

ಬೆಳಗಾವಿ:ಹಿಂದೂ ಧರ್ಮ ಉಳಿಯಲು ಮತಾಂತರ ನಿಷೇಧ ಕಾಯ್ದೆ ಜಾರಿ ಒಂದೇ ದಾರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಆಮಿಷ,ಲವ್ ಜಿಹಾದ್‌ನಿಂದ ನಡೆಯುವ ಮತಾಂತರ ತಡೆಯಬೇಕಾಗಿದೆ ಎಂದು ತಿಳಿಸಿದರು.

ಹಿಂದೂ ಧರ್ಮ ಉಳಿಯಬೇಕಾದರೇ ಇದೊಂದೇ ದಾರಿ,ಮತಾಂತರ ನಿಷೇಧ ಕಾಯ್ದೆ ಜಾರಿಯಾಗಲೇಬೇಕು ಎಂದರು.

ವಿಧೇಯಕ ಮಂಡನೆ ‌ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಈ ವಿಧೇಯಕ ಸರ್ಕಾರಕ್ಕೆ ಪ್ರತಿಷ್ಠೆಯಾಗಿದೆ. ಪರಿಷತ್​ನಲ್ಲಿ ಬಹುಮತಕ್ಕೆ ತಂತ್ರಗಾರಿಕೆ ಮಾಡಿದ್ದೇವೆ ಎಂದು ಯತ್ನಾಳ್ ತಿಳಿಸಿದರು.

ಕಾಂಗ್ರೆಸ್ ನಾಯಕರಿಗೆ ದೇಶ ಹಾಳಾದರೂ ಪರವಾಗಿಲ್ಲ.ಅವರಿಗೆ ಬೇಕಾಗಿರುವುದು ವೋಟ್ ಬ್ಯಾಂಕ್ ಎಂದು ಟೀಕಿಸಿದರು.

ಡಿ.ಕೆ.ಶಿವಕುಮಾರ್ ವಿಧೇಯಕ ಪ್ರತಿ ಹರಿದುಹಾಕಿ ನಾಟಕ ಮಾಡಿದ್ದಾರೆ, ವಿಧೇಯಕ ವಿಚಾರದಲ್ಲಿ ಕಾಂಗ್ರೆಸ್‌‌ ನವರೇ ಬೆಂಬಲಿಸುತ್ತಾರೆ. ನಮಗೆ ಬೆನ್ನೆಲುಬಾಗಿ ಅವರು ನಿಲ್ಲುತ್ತಾರೆ, ಮತಾಂತರ ಬಿಲ್ ಪಾಸ್ ಮಾಡುತ್ತೇವೆ ಎಂದು ಹೇಳಿದರು.