ಸಿದ್ದು ಸಿಎಂ ಆಗಿದ್ದಾಗಲೇ ವಿಧೇಯಕ ಸಿದ್ದಪಡಿಸಲಾಗಿತ್ತು-ಅಶೋಕ್ ವಾಗ್ದಾಳಿ

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹುಟ್ಟಿದ ಕೂಸಿಗೆ ಸ್ವಲ್ಪ ಬದಲಾವಣೆ ಮಾಡಿ ಮತಾಂತರ ನಿಷೇಧ ವಿಧೇಯಕವನ್ನು ತಂದಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರ ಕೂಸಿಗೆ ಸ್ವಲ್ಪ ಟಚಪ್ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ವಿಧೇಯಕವನ್ನು ಸಿದ್ದಪಡಿಸಲಾಗಿತ್ತು.ಈಗ ಕಾಂಗ್ರೆಸ್‍ನ ಬಣ್ಣ ಬಟಾಬಯಲಾಗಿದೆ ಎಂದು ಟೀಕಿಸಿದರು.

ಹಿಂದೂಗಳನ್ನು ಮತಾಂತರಗೊಳಿಸಲು ಷಡ್ಯಂತ್ರಗೊಳಿಸಲಾಗುತ್ತಿದೆ. ವಿದೇಶದಿಂದಲೂ ಸಾಕಷ್ಟು ಹಣ ಬರುತ್ತದೆ. ಹೀಗಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ವಿಧೇಯಕಕ್ಕೆ ಸಂಬಂಧಿಸಿದ ಕಡತಕ್ಕೆ ಸಹಿ ಮಾಡಿದ್ದಾರೆ. ಅವರೇ ತಂದಿರುವ ಕೂಸು ಇದು ವಾಗ್ದಾಳಿ ನಡೆಸಿದರು.

ಅಲ್ಪಸಂಖ್ಯಾತರ ಸಭೆಗೆ ಚಾಂಪಿಯನ್ ರೀತಿ ಸಿದ್ದರಾಮಯ್ಯ ಹೋಗುತ್ತಿದ್ದರು. ಈ ವಿಧೇಯಕಕ್ಕೆ ನೀವೇ ಸಹಿ ಮಾಡಿದ್ದೀರಲ್ಲ ಎಂದು ಅವರು ಪ್ರಶ್ನೆ ಮಾಡುತ್ತಾರೆ. ಈಗ ಸಿದ್ದರಾಮಯ್ಯನವರು ಅಪಹಾಸ್ಯಕ್ಕೀಡಾಗಿದ್ದಾರೆ ಆದರೂ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಗೆ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುವ ನೈತಿಕ ಹಕ್ಕು ಇಲ್ಲ. ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಮಸೂದೆಯನ್ನು ಸಿದ್ದಪಡಿಸಿದ್ದರು. ಮತಾಂತರದಿಂದಾಗುವ ಅನಾಹುತಗಳನ್ನು ಕಂಡು ಮಸೂದೆ ಕರಡನ್ನು ಸಿದ್ದಪಡಿಸಿದ್ದರು. ನಾವು ಅದಕ್ಕೆ ಸ್ವಲ್ಪ ಬದಲಾವಣೆ ತಂದು ಮಸೂದೆ ತರುತ್ತಿದ್ದೇವೆ ಎಂದು ಅಶೋಕ್ ಹೇಳಿದರು.

ಇನ್ನು ಮುಂದೆ ಕಾಂಗ್ರೆಸ್ ಅಲ್ಪಸಂಖ್ಯಾತರ ಚಾಂಪಿಯನ್ ಆಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ವಿರೋಧ ಮಾಡುತ್ತಿದೆ. ಈ ವಿಧೇಯಕದಿಂದ ಭಯವೇಕೆ? ನಿಮ್ಮನ್ನು ಯಾರಾದರೂ ಮತಾಂತರ ಮಾಡಲು ಪ್ರಯತ್ನ ಮಾಡಿದ್ದರಾ ಎಂದು ಪ್ರಶ್ನಿಸಿದರು.