ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ತೀವ್ರವಾಗಿ ಹಬ್ಬುತ್ತಿರುವ ಕಾರಣ ನೈಟ್ ಕರ್ಫ್ಯೂ ಫಿಕ್ಸ್ ಆಗಿದೆ.
ರಾಜ್ಯ ಸರ್ಕಾರ ಡಿಸೆಂಬರ್ 28ರಿಂದ 10 ದಿನಗಳ ಕಾಲ ರಾತ್ರಿ 10ರಿಂದ ಮುಂಜಾನೆ 5ರವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಧಿಸಿದೆ.
ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಡಿ. 31ರಂದು ಹೊಸ ವರ್ಷಾಚರಣೆ ಮಾಡದಂತೆ ನಿರ್ಬಂಧವನ್ನೂ ಹೇರಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಉನ್ನತ ಅಕಾರಿಗಳನ್ನೊಳಗಂಡ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಚಿವ ಕೆ.ಸುಧಾಕರ್, ಸೋಂಕು ವೇಗವಾಗಿ ಹರಡುತ್ತಿರುವುದರಿಂದ ರಾಜ್ಯಾದ್ಯಂತ 10 ದಿನಗಳ ಕಾಲ ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ಫ್ಯೂ ಸಂದರ್ಭದಲ್ಲಿ ಪಬ್, ಬಾರ್, ಲೈವ್ ಬ್ಯಾಂಡ್, ಡಿಸ್ಕೊತೆಕ್‍ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಬಂದ್ ಮಾಡಬೇಕು. ಈ ನಿಯಮ ಮೀರುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.
ಡಿಸೆಂಬರ್ 31ರ ಹೊಸ ವರ್ಷಾಚರಣೆಯನ್ನು ಸಾರ್ವಜನಿಕ ಸ್ಥಳದಲ್ಲಿ ಆಚರಣೆ ಮಾಡದಂತೆ ನಿರ್ಬಂಧ ವಿಸಲಾಗಿದೆ.
ರಾತ್ರಿ10ರಿಂದ ಮುಂಜಾನೆ 5ರವರೆಗೆ ಕರ್ಫ್ಯೂ ಇರುವುದರಿಂದ ಯಾರೂ ಕೂಡಾ ಮನೆಯಿಂದ ಹೊರಬರುವಂತಿಲ್ಲ ಎಂದು ಹೇಳಿದರು.
ಹೋಟೆಲ್‍ಗಳಲ್ಲಿ ಶೇ.50ರಷ್ಟು ಆಸನಗಳನ್ನು ಮಾತ್ರ ಗ್ರಾಹಕರಿಗೆ ನೀಡಬೇಕು.ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚಿಸಿದರು.
ಹೆಚ್ಚು ಜನರು ಸೇರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಹಗಲಿನಲ್ಲಿ ಬಾರ್, ಪಬ್, ಲೈವ್ ಬ್ಯಾಂಡ್, ಸಿನಿಮಾ ಥಿಯೇಟರ್, ಡಿಸ್ಕೊತೆಕ್ ಮತ್ತಿತರ ಕಡೆ ಶೇ.50ರಷ್ಟು ಜನರು ಕುಳಿತುಕೊಳ್ಳಬೇಕು. ಪ್ರತಿಯೊಬ್ಬರು ಮಾರ್ಗಸೂಚಿಗಳನ್ನು ಕಟ್ಟುನಿಟಾಗಿ ಪಾಲನೆ ಮಾಡಿ ಎಂದು ಸುಧಾಕರ್ ತಿಳಿಸಿದರು.

