ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ, ಸರ್ಕಾರ ಮತ್ತು ಪಕ್ಷದ ಯಾವುದೇ ಬೆಳವಣಿಗೆಗಳ ಬಗ್ಗೆ ಸಚಿವರು ಇಲ್ಲವೇ ಶಾಸಕರು ಬಹಿರಂಗ ಹೇಳಿಕೆ ನೀಡದಂತೆ ಕಡಿವಾಣ ಹಾಕಬೇಕೆಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸೂಚಿಸಿದ್ದಾರೆ.
ಇತ್ತೀಚೆಗೆ ಸಚಿವ ಮುರುಗೇಶ್ ನಿರಾಣಿ, ಕೆ.ಎಸ್.ಈಶ್ವರಪ್ಪ ಪ್ರತ್ಯೇಕವಾಗಿ ಸಭೆ ಸೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವ ಸಂಕ್ರಾಂತಿ ನಂತರ ಬದಲಾವಣೆಯಾಗಲಿದೆ ಎಂದು ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಕೇಂದ್ರ ವರಿಷ್ಠರು ರಾಜ್ಯ ನಾಯಕರ ಬಾಯಿಗೆ ಕಡಿವಾಣ ಹಾಕಲು ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಳೀನ್‍ಕುಮಾರ್ ಕಟೀಲ್ ಜೊತೆ ದೂರವಾಣಿ ಮೂಲಕ ಚರ್ಚಿಸಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಂಬಂಧಪಟ್ಟವರನ್ನು ಹೊರತುಪಡಿಸಿ ಅನಗತ್ಯವಾಗಿ ಯಾರೂ ನಾಯಕತ್ವ ಬದಲಾವಣೆ ಇಲ್ಲವೇ ಸಂಪುಟ ಪುನಾರಚನೆ , ಕುರಿತಂತೆ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುವ ಇಲ್ಲವೇ ಸಂಪುಟ ಪುನಾರಚನೆ, ಸಾಧ್ಯವಾದರೆ ವಿಸ್ತರಣೆ ಮಾಡುವ ಬಗ್ಗೆ ವರಿಷ್ಠರು ಸೂಕ್ತ ಕಾಲದಲ್ಲಿ ತೀಮಾರ್ನಿಸುತ್ತಾರೆ. ತಮಗೆ ನೀಡಿರುವ ಜವಾಬ್ದಾರಿಯನ್ನಷ್ಟೇ ನಿಭಾಯಿಸಬೇಕು ಎಂದು ಕಡಕ್ ಆಗಿ ಹೇಳಿದ್ದಾರೆ.
ಗೊಂದಲ ಸೃಷ್ಟಿಸುವ ಕೆಲಸ ಮಾಡಿದರೆ ಶಿಸ್ತು ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.
ಬೆಳಗಾವಿ ಅವೇಶನದಲ್ಲಿ ಸಚಿವರಿಬ್ಬರು ಕಲಾಪ ನಡೆಸುತ್ತಿರುವ ಸಂದರ್ಭದಲ್ಲೇ ಪ್ರತ್ಯೇಕವಾಗಿ ಸಭೆ ನಡೆಸುವ ಅಗತ್ಯವೇನು. ಇದರಿಂದ ವಿರೋಧ ಪಕ್ಷದ ಬಾಯಿಗೆ ಆಹಾರ ನೀಡಿದಂತಾಗುಗುವುದಿಲ್ಲವೇ? ನಾಯಕತ್ವ ಬದಲಾವಣೆ ಮಾಡುವುದು, ಬಿಡುವುದು ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

