ತೀವ್ರ ಗೊಳ್ಳುತ್ತಿರುವ ಓಮಿಕ್ರಾನ್ : ದೇಶಾದ್ಯಂತ ಹೈ-ಅಲರ್ಟ್

ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಆತಂಕ ಸೃಷ್ಟಿಸಿರುವ ಓಮಿಕ್ರಾನ್ ಸೋಂಕು ಭಾನುವಾರ ಒಂದೇ ದಿನ 150ರ ಗಡಿ ದಾಟಿದೆ.

ಇದರಿಂದಾಗಿ ದೇಶಾದ್ಯಂತ ಹೈ-ಅಲರ್ಟ್ ಮತ್ತಷ್ಟು ತೀವ್ರಗೊಂಡಿದೆ.

ಸೋಮವಾರ ಬೆಳಗ್ಗೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಸೋಂಕಿನ ಪ್ರಮಾಣ 422 ರಿಂದ 578ಕ್ಕೆ ಹೆಚ್ಚಾಗಿದೆ. ಅಂದರೆ 156 ಹೊಸ ಪ್ರಕರಣಗಳು ಪತ್ತೆಯಾದಂತಾಗಿದೆ.

ಹಿಮಾಚಲ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಹೊಸದಾಗಿ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸೋಂಕಿನ ಸಂಖ್ಯೆಯಲ್ಲಿ ಸದ್ಯಕ್ಕೆ ನಂಬರ್ ಒನ್ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದ್ದು, ಇದು ಹೀಗೇ ಮುಂದುವರಿದರೆ  ಮಹಾರಾಷ್ಟ್ರ ದೆಹಲಿಯನ್ನು ಹಿಂದಿಕ್ಕಲಿದೆ.

ದೆಹಲಿ 142, ಮಹರಾಷ್ಟ್ರ 141, ಕೇರಳ 57, ಗುಜರಾತ್ 49, ರಾಜಸ್ಥಾನ 43, ತೆಲಂಗಾಣ 41, ತಮಿಳುನಾಡು 34, ಕರ್ನಾಟಕ 31, ಮಧ್ಯ ಪ್ರದೇಶ 9, ಆಂಧ್ರ ಪ್ರದೇಶ 6, ಪಶ್ಚಿಮ ಬಂಗಾಳ 6, ಹರ್ಯಾಣ 4, ಒಡಿಸಾ 4, ಚಂಡಿಗಡ್ 3, ಜಮ್ಮು ಕಾಶ್ಮೀರ 3, ಉತ್ತರ ಪ್ರದೇಶ 2, ಹಿಮಾಚಲ ಪ್ರದೇಶ 1, ಲಡಾಕ್ 1, ಉತ್ತರ ಖಾಂಡ್ 1 ಪ್ರಕರಣಗಳು ವರದಿಯಾಗಿವೆ.