ಬೆಂಗಳೂರು:ರಾಜ್ಯದ 58 ಸ್ಥಳೀಯ ಸಂಸ್ಥೆಗಳು ಹಾಗೂ 57 ಗ್ರಾಮ ಪಂಚಾಯಿತಿಗಳಿಗೆ ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿದೆ.
ಮೇಲ್ಮನೆ ಚುನಾವಣೆಯಂತೆ ನಗರಸ್ಥಳೀಯ ಸಂಸ್ಥೆಗಳಿಗೂ ಹಾಗೂ ಗ್ರಾಮಪಂಚಾಯ್ತಿಗಳಿಗೂ ಬಿರುಸಿನ ಮತದಾನ ನಡೆದಿದೆ. ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಐದು ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ 1185 ವಾರ್ಡ್‍ಗಳಿಗೆ ಇಂದು ಮತದಾನ ನಡೆಯಿತು.
ಮೈ ಕೊರೆಯುವ ಚಳಿಯಿಂದಾಗಿ ಮಂದಗತಿಯಲ್ಲಿ ಮತದಾನ ಶುರುವಾಯಿತು.
ಆನೇಕಲ್‍ನ ಹೆಬ್ಬಗೋಡಿ ನಗರಸಭೆ, ಜಿಗಣಿ, ಚಂದಾಪುರ, ಬಿಡದಿ ಪುರಸಭೆ ಸೇರಿದಂತೆ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳು, 57 ಗ್ರಾಮಪಂಚಾಯ್ತಿಗಳ ಸಾರ್ವತ್ರಿಕ ಚುನಾವಣೆಗೆ ಮತದಾನ ಶಾಂತಿಯುತವಾಗಿ ನಡೆಯಿತು.
ಅದೇ ರೀತಿ ಕೊಳ್ಳೆಗಾಲ, ಹರಿಹರ, ದಾಂಡೇಲಿ, ಗೌರಿಬಿದನೂರು, ಜಮಖಂಡಿ ನಗರಸಭೆಗಳು, ಮೂಡಲಗಿ, ಸೇಡಂ, ಹಾನಗಲ್ ಪುರಸಭೆಗಳು ಹಾಗೂ ಚಡಚಣ ಪಟ್ಟಣ ಪಂಚಾಯಿತಿ ಉಪಚುನಾವಣೆಗೂ ಮತ್ತು ಗ್ರಾಪಂಗಳ 386 ಸ್ಥಾನಗಳಿಗೂ ಮತದಾನ ನಡೆಯಿತು.
ಅಗತ್ಯಬಿದ್ದರೆ ಮರುಮತದಾನ ಡಿ.29ರಂದು ನಡೆಯಲಿದೆ. ಡಿ.30ರಂದು ಆಯಾ ತಾಲ್ಲೂಕು ಕೇಂದ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

