ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನೈಟ್ ಕರ್ಫ್ಯೂ ಜಾರಿ -ಬೊಮ್ಮಾಯಿ

ಬೆಂಗಳೂರು:ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅನಿವಾರ್ಯವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಡಿಸೆಂಬರ್ 28 ರಿಂದ ರಾಜ್ಯಾದ್ಯಂತ 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಮುಂಜಾನೆ 5ರವರೆಗೆ ಕರ್ಫ್ಯೂ ಜಾರಿ ಮಾಡಿರುವುದಕ್ಕೆ ಹೋಟೆಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದರು.

ಈ ಸಂಬಂಧ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಿಎಂ, ಜನರಿಗೆ ತೊಂದರೆ ಕೊಟ್ಟು ನೈಟ್ ಕರ್ಫ್ಯೂ ವಿಧಿಸಬೇಕೆಂಬ ದುರುದ್ದೇಶ ಸರ್ಕಾರಕ್ಕಿಲ್ಲ. ಸಾರ್ವಜನಿಕರ ಆರೋಗ್ಯಕ್ಕಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ವ್ಯಾಪಾರ, ವಹಿವಾಟು, ಉದ್ಯಮ ನಡೆಸುವವರಿಗೆ ತೊಂದರೆ ಕೊಡಬೇಕೆಂಬ ದುರದ್ದೇಶ ನಮಗೂ ಇಲ್ಲ ಆದರೆ ಕೋವಿಡ್ ನಿಯಂತ್ರಣಕ್ಕೆ ಇದು ಅನಿವಾರ್ಯ ಹಾಗಾಗಿ ಸರ್ಕಾರದ ನಿರ್ಧಾರವನ್ನು ಪಾಲಿಸಬೇಕು ಎಂದು ಹೇಳಿದರು ಎಂದು ತಿಳಿಸಿದರು.

ಸರ್ಕಾರದ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿದಾಗ ಮಾತ್ರ ಸೋಂಕು ನಿಯಂತ್ರಣ ಸಾಧ್ಯವಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಮನವಿ ಮಾಡಿದರು.

ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ: ಮುಂಬರುವ 2023ರ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದು ಇದೇ ವೇಳೆ ಬೊಮ್ಮಾಯಿ ಸ್ಪಷ್ಟಪಡಿಸಿದರು.

ನಮ್ಮಲ್ಲಿ ಯಾವುದೇ ತರದ ಬಿಕ್ಕಟ್ಟು ಇಲ್ಲ. ಸಣ್ಣಪುಟ್ಟ ಗೊಂದಲಗಳಿದ್ದರೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಪಕ್ಷದಲ್ಲಿ ಬದಲಾವಣೆಯಾಗುತ್ತದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಇದೆ. ನಾಯಕತ್ವದ ಬಗ್ಗೆ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಚರ್ಚೆ ಮಾಡುತ್ತೀರ ಎಂಬ ಮಾಧ್ಯಮದವರ ಪ್ರಶ್ನೆಗೆ  ಗರಂ ಆದ ಸಿಎಂ, ಎಲ್ಲವನ್ನೂ ಮಾಧ್ಯಮಗಳಿಗೆ ತಿಳಿಸಬೇಕೆಂಬ ನಿಯಮವಿದೆಯೇ ಎಂದು ಸಿಟ್ಟಾದರು.