ಜನರ ರಕ್ಷಣೆ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧ ಅನಿವಾರ್ಯ -ಡಾ.ಸುಧಾಕರ್

ಬೆಂಗಳೂರು: ಜನರ ರಕ್ಷಣೆ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿದೆ, ಸರ್ಕಾರಕ್ಕಾಗಲಿ ನಮಗಾಗಲಿ ಯಾವುದೇ ಚಟುವಟಿಕೆಯನ್ನು ನಿರ್ಬಂಧಿಸುವ ಉದ್ದೇಶವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಂದೆ ಎಂತಹ ಪರಿಸ್ಥಿತಿ ಉಂಟಾಗಿತ್ತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಯಾವುದೇ ಚಟುವಟಿಕೆ ಬಂದ್ ಮಾಡುವುದರಿಂದ ನಮಗೆ ಲಾಭವೂ ಇಲ್ಲ, ಸಂತೋಷವೂ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಉದ್ಯಮದವರಿಗೆ ಮನವಿ ಮಾಡುವುದೇನೆಂದರೆ ಸೋಂಕು ಬಹಳ ಹೆಚ್ಚಾದರೆ ಮುಂದೆ ಯಾವ ರೀತಿ ಪರಿಸ್ಥಿತಿ ಎದುರಾಗಲಿದೆ ಎಂಬುದನ್ನು ಅರಿತು ಕೆಲ ನಿರ್ದಾರ ತೆಗೆದುಕೊಂಡಿದ್ದೇವೆ  ಅದನ್ನು ಎಲ್ಲರೂ ಪಾಲಿಸಬೇಕು, ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಕೋರಿದರು.

ಒಮಿಕ್ರೋನ್ ಸೋಂಕು ನಮ್ಮ ಕೈಮೀರಿ ಹೋಗದಂತೆ ನೋಡಿಕೊಳ್ಳಬೇಕು ಅದಕ್ಕಾಗಿ ಕೆಲವು ನಿಯಮಗಳು ಪಾಲಿಸುವುದು ಅನಿವಾರ್ಯ ಎಂದರು.

ವೈಜ್ಙಾನಿಕವಾಗಿ ಹೇಳಬೇಕಾದರೆ ಕೇಸು ಅತಿ ಹೆಚ್ಚು ಆದಾಗ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗದಿದ್ದಾಗ ಜನ ಆತಂಕಕ್ಕೊಳಗಾಗುತ್ತಾರೆ ಹಾಗಾಗಿ ಸೋಂಕು ಹೆಚ್ಚಾದಂತೆ ನೋಡಿಕೊಳ್ಳಲು ಕೆಲವು ನಿರ್ಬಂಧ ವಿಧಿಸುವುದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

ಚೆನ್ನೈನಲ್ಲಿ ಸೋಂಕು ಹೆಚ್ಚಾಗಿದ್ದರೂ ಅಲ್ಲಿ ಯಾವುದೇ ಕಠಿಣ ನಿಯಮ ಜಾರಿ ಇಲ್ಲವಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ನಾವು ಯಾವುದೇ ರಾಜ್ಯವನ್ನು ನೋಡಿ ನಮ್ಮಲ್ಲಿ ನಿಯಮಗಳನ್ನು ಪಾಲಿಸಬೇಕಾಗಿಲ್ಲ ಎಂದು ಉತ್ತರಿಸಿದರು.

ಒಟ್ಟಾರೆ ನಮ್ಮಲ್ಲಿ ಸೋಂಕು ನಿಗ್ರಹ ಆಗಬೇಕು ಎಲ್ಲಾ ಚಟುವಟಿಕೆಗಳು ಮುಂದುವರಿಯಬೇಕು ಯಾರಿಗೂ ತೊಂದರೆ ಆಗಬಾರದು ಎಂಬುದೇ ನಮ್ಮ ಉದ್ದೇಶ ಎಂದು ಡಾಕ್ಟರ್ ಸುಧಾಕರ್ ಹೇಳಿದರು.