ಸೋಂಕು ಹರಡುವ ರೀತಿ ನೋಡಿ ಮುಂದಿನ ಕ್ರಮ –ಸುಧಾಕರ್

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಹತ್ತುದಿನಗಳ ಮಾರ್ಗಸೂಚಿ ಬಿಡುಗಡೆಯಾಗಿದೆ. ಇದನ್ನು ಎಲ್ಲರೂ ಒಳ್ಳೆಯ ರೀತಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಸೂಚ್ಯವಾಗಿ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ‌ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಅವರು ಮಾತನಾಡಿದರು.

ಮಾರ್ಗಸೂಚಿಯ ಸ್ಥಿತಿಗತಿಗಳನ್ನು ನೋಡಿಕೊಂಡು ಸೋಂಕಿನ ಪ್ರಭಾವ ಯಾವ ರೀತಿ ಹರಡುತ್ತಿದೆ ಎಂಬುದನ್ನು ಅವಲೋಕಿಸಿ ತಜ್ಞರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಈ ಮೂಲಕ ಕರ್ಫ್ಯೂ ಮತ್ತೂ ಮುಂದುವರಿಯಬಹುದೆಂಬ ಸುಳಿವನ್ನು‌ ಅವರು ನೀಡಿದರು.

ರಾತ್ರಿ ಕರ್ಫ್ಯೂ ಗೆ ಹೋಟೆಲ್ ಉದ್ಯಮಿಗಳು  ಮಂಗಳವಾರ ಕೊಡ ವಿರೋಧಿಸಿದ್ದಾರಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಈ ಹಿಂದೆ ಒಂದು ಮತ್ತು ಎರಡನೇ ಅಲೆ ವೇಳೆ ಲಾಕ್ಡೌನ್ ಆಗಿದ್ದಾಗ ಏನಾಗಿತ್ತು ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಪದೇ ಪದೇ ಇದೇ ವಿಷಯ ಮಾತನಾಡುವುದು ಸರಿಯಲ್ಲ, ನಾವು ಬೇಕೆಂದು ಯಾವುದೇ ಚಟುವಟಿಕೆಯನ್ನು ನಿರ್ಬಂಧಿಸಿಲ್ಲ, ಹೀಗೆ ನಿರ್ಬಂಧ ಮಾಡುವುದು  ನಮಗೂ ಸಂತೋಷವಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ ಗಳನ್ನು ಕೊಡುವ ಬಗ್ಗೆ ಕೇಳಿದ ಪ್ರಶ್ನೆಗೆ  ಅವಶ್ಯಕತೆ ಇರುವವರಿಗೆ ಮಾತ್ರ ಬೆಡ್ ಸಿಗಬೇಕು, ಅಂತವರಿಗೆ ವೈದ್ಯರ ಸಲಹೆ ಮೇರೆಗೆ ಹಾಸಿಗೆಗಳನ್ನು ನೀಡುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಉತ್ತರಿಸಿದರು.

ಕಳೆದ ಬಾರಿ ಕೊವಿಡ್ ಸಂದರ್ಭದಲ್ಲಿ ಬೆಡ್ ಸಿಗದೆ ಜನ ತೊಂದರೆ ಅನುಭವಿಸಿದ್ದರು. ಈಬಾರಿ ಹಾಗಾಗದಂತೆ ಎಚ್ಚರ ವಹಿಸಲಾಗುವುದು ಅದಕ್ಕೆ ಆಸ್ಪತ್ರೆಗಳು ಸಿದ್ದತೆ ಮಾಡಿಕೊಳ್ಳುತ್ತಿವೆ ಎಂದು ಸಚಿವರು ತಿಳಿಸಿದರು.

15 ರಿಂದ18 ವರ್ಷದೊಳಗಿನ ಮಕ್ಕಳಿಗೆ ಜನವರಿ 3ರಂದು ಮ್ಯಾಕ್ಸಿನ್ ನೀಡಲು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಇದು ರಾಜ್ಯಾದ್ಯಂತ  ನಡೆಯಲಿದೆ ಎಂದು ಸುಧಾಕರ್ ತಿಳಿಸಿದರು.

ಕೊವಿಶೀಲ್ಡ್ ಗೆ ಹೋಲಿಸಿದರೆ ಕೋವ್ಯಾಕ್ಸಿನ್  ನಮ್ಮಲ್ಲಿ ಕಡಿಮೆ ಇದೆ ಇದರ ಸರಬರಾಜಿನಲ್ಲಿ ಯಾವುದೆ ವ್ಯತ್ಯಯ ವಾಗುವುದಿಲ್ಲ ಎಂಬ ವಿಶ್ವಾಸವಿದೆ.  ಕೇಂದ್ರ ಸರ್ಕಾರ ಸಾಕಷ್ಟು ಡೋಸ್ ಕೊವ್ಯಾಕ್ಸಿನ್ ನೀಡಲಿದೆ ನಾವು ಈಗಾಗಲೆ ಮನವಿ ಮಾಡಿದ್ದೇವೆ ಎಂದು ಸುಧಾಕರ್ ತಿಳಿಸಿದರು.