ಮೈಸೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರನ್ನು ಹೊಗಳಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71 ನೆ ಜನ್ಮದಿನದ ಸಂದರ್ಭದಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ಕೃಷ್ಣರಾಜ ಕ್ಷೇತ್ರದಲ್ಲಿ 20 ದಿನಗಳ ಮೋದಿ ಯುಗ್ ಉತ್ಸವ ಕಾರ್ಯಕ್ರಮ ಮಾಡಿದ್ದರು.
ಆ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಅಲ್ಲದೇ ಸುಮಾರು 13 ಕ್ಕೂ ಅಧಿಕ ಕೇಂದ್ರ, ರಾಜ್ಯದ ಸಚಿವರುಗಳು ಆಗಮಿಸಿ ಸೂರ್ಯ ಪಥ್, ಸಂಗೀತ ಮನೆಗೆ ಸರ್ಕಾರಿ ಶಾಲೆಯ ಮಕ್ಕಳು, ನಗರ ಅಂಚಿನ ಗ್ರಾಮಗಳ ಅಭಿವೃದ್ಧಿ ಕಾರ್ಯ, ಸಮಗ್ರ ಆರೋಗ್ಯ, ಹೀಗೆ ಹಲವಾರು ಯೋಜನೆಗಳ ಅನುಷ್ಠಾನ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆಗಮಿಸಿ 20 ದಿನಗಳ ಕಾರ್ಯಕ್ರಮದ ಒಂದು ಪುಸ್ತಕವನ್ನು ಸಹ ಬಿಡುಗಡೆ ಮಾಡಿ ರಾಮದಾಸ್ ಅವರ ಈ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.
ಇದಲ್ಲದೆ ರಾಜ್ಯಾದ್ಯಂತ ಈ ಕಾರ್ಯಗಳನ್ನು ವಿಸ್ತರಿಸುವುದಾಗಿಯೂ ಹೇಳಿದ್ದರು.
ರಾಮದಾಸ್ ಅವರು ಮೋದಿ ಯುಗ್ ಉತ್ಸವದ ಪುಸ್ತಕವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಕರ್ನಾಟಕ ಭಾಜಪಾ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವಾರು ಪಕ್ಷದ ಮುಖಂಡರು ಹಾಗೂ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ನೀಡಿದ್ದರು.
ಕಳೆದ 2 ದಿನಗಳಿಂದ ಬಿಜೆಪಿ ರಾಜ್ಯ ಕಾರ್ಯಕಾರಣಿಯು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು ಮಂಗಳವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ ಕಾರ್ಯಗಳ ಬಗ್ಗೆ ಶಾಸಕರನ್ನು, ಸಚಿವರನ್ನು ಕುರಿತು ರಾಜ್ಯ ಭಾಜಪಾ ಉಸ್ತುವಾರಿ ಅರುಣ್ ಸಿಂಗ್ ಮಾತನಾಡುತ್ತಿದ್ದರು.
ಆ ಸಂದರ್ಭದಲ್ಲಿ ಇಲ್ಲಿ ಮೈಸೂರಿನ ಶಾಸಕರಾದ ರಾಮದಾಸ್ ಜಿ ಕುಳಿತಿದ್ದಾರೆ ಅವರ ಕ್ಷೇತ್ರದಲ್ಲಿ ಕ್ಯಾಂಪ್ ಗಳನ್ನು ಮಾಡಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಹಾಡಿ ಹೊಗಳಿದರು.
ಆರ್.ಅಶೋಕ್, ಡಾ.ಸುಧಾಕರ್ ಎಲ್ಲರೂ ಅಲ್ಲಿಗೆ ಹೋಗಿ ನೋಡಿದ್ದಾರೆ ಒಂದೊಂದು ಯೋಜನೆಗಳ ಅನುಷ್ಠಾನದ ಬಗ್ಗೆ ಒಂದು ಪುಸ್ತಕವನ್ನೂ ಸಹ ಅವರು ಮಾಡಿದ್ದಾರೆ ಅವರಿಗೆ ಎಲ್ಲರೂ ಸೇರಿ ಚಪ್ಪಾಳೆ ತಟ್ಟಿರಿ ಎಂದು ಹೇಳಿದರು.
ರಾಮದಾಸ್ ಅವರು ಶಾಸಕರಾಗಿ ಆದಿವಾಸಿಗಳಿಗೆ, ಬಡವರಿಗೆ ಯೋಜನೆಗಳ ಅನುಷ್ಠಾನವನ್ನು ಮಾಡಿದ್ದಾರೆ. ನೀವುಗಳೂ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಕ್ಯಾಂಪ್ ಹಾಕಿಕೊಂಡು ಈ ರೀತಿ ಯೋಜನೆಗಳ ಅನುಷ್ಠಾನ ಮಾಡಿಸಿ ಎಂದರು.
ಮನೆ ಮನೆಗೆ ತೆರಳಿ ಇದು ಮೋದಿಜಿ ಸರ್ಕಾರದ ಯೋಜನೆ, ಇದು ಬೊಮ್ಮಾಯಿ ಸರ್ಕಾರದ ಯೋಜನೆ ಎಂದು ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಸಲಹೆ ಸಹಾ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಮದಾಸ್ ಅರುಣ್ ಸಿಂಗ್ ಜಿ ಅವರ ಈ ಪ್ರಶಂಸೆಯ ಮಾತುಗಳು ನನಗೆ ಕೆಲಸ ಮಾಡಲು ಮತ್ತಷ್ಟು ಹುರುಪು ತಂದಿದೆ ಧನ್ಯತಾಭಾವದಿಂದ ನುಡಿದರು.
ಕ್ಷೇತ್ರದಲ್ಲಿ ಈ ಮಟ್ಟಿಗೆ ಯೋಜನೆ ಅನುಷ್ಠಾನ ಆಗುತ್ತಿದೆ ಅಂದರೆ ಅದರ ಹಿಂದೆ ನಮ್ಮ ಕಾರ್ಯಕರ್ತರ ಹಾಗೂ ಅಧಿಕಾರಿಗಳ ಶ್ರಮ ಹೇಳತೀರದು, ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ಸರ್ಕಾರ ಜೊತೆ ಗೂಡಿ ಕ್ಷೇತ್ರದ ಜನತೆಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವಲ್ಲಿ ಕ್ಷೇತ್ರವನ್ನು ನಂ.1 ಮಾಡುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ ಎಂದು ಹೇಳಿದರು.

