ಜನರು ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ -ಡಿಕೆಶಿ

ಬೆಂಗಳೂರು:ನಾನು ಅಧ್ಯಕ್ಷನಾದ ಮೇಲೆ ಮಾತ್ರ ಕಾಂಗ್ರೆಸ್ ಚುನಾವಣೆಗಳನ್ನು ಗೆಲ್ಲುತ್ತಿಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲುವುದರ ಹಿಂದೆ ರಾಜ್ಯದ ಜನರ ಅಭಿಪ್ರಾಯ ಅಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಗರವಾಸಿಗಳು, ಪಟ್ಟಣವಾಸಿಗಳ ಅಭಿಪ್ರಾಯ ಕಾಂಗ್ರೆಸ್ ಪರ ವಾಲುತ್ತಿದೆ ಎಂಬುದಕ್ಕೆ ಈಗಿನ ಫಲಿತಾಂಶಗಳು ಸ್ಪಷ್ಟವಾಗಿದೆ. ಮತದಾರರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಸಾಮಾನ್ಯವಾಗಿ ಶಾಸಕರಿರುವ ಕಡೆ ಆಡಳಿತ ಪಕ್ಷಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ. ಬಿಜೆಪಿ ಆಡಳಿತ ಪಕ್ಷವಾಗಿದ್ದರೂ, ಬಿಜೆಪಿ ಶಾಸಕರಿದ್ದರೂ ಜನರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತಿದ್ದಾರೆ. ಇದು ರಾಜ್ಯದ ಜನರ ಭಾವನೆ ಯಾವ ರೀತಿ ಇದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ಇನ್ನೂ ಫಲಿತಾಂಶ ಬರುವುದು ಬಾಕಿ ಇದೆ. ಪೂರ್ಣ ಫಲಿತಾಂಶ ಬಂದ ನಂತರ ಅಂಕಿ-ಅಂಶಗಳ ಸಮೇತ ಮಾತನಾಡುತ್ತೇನೆ ಎಂದರು.

ಇದು ಮುಂಬರುವ ವಿಧಾನಸಭೆ ಚುನಾವಣೆ ದಿಕ್ಸೂಚಿಯೇ ಎಂಬ ಪ್ರಶ್ನೆಗೆ, ಮಾಧ್ಯಮಗಳೇ ಇದನ್ನು ವಿಮರ್ಶೆ ಮಾಡಲಿ ಎಂದು ಪ್ರತಿಕ್ರಿಯಿಸಿದರು.

ಆಡಳಿತ ಪಕ್ಷವಿದ್ದರೂ, ಶಾಸಕರು, ಮಂತ್ರಿಗಳ ಕ್ಷೇತ್ರದಲ್ಲಿ ಏನೇನಾಗಿದೆ, ಜನ ಯಾವ ರೀತಿ ತೀರ್ಪು ನೀಡುತ್ತಿದ್ದಾರೆ ಎಂಬುದನ್ನು ನೋಡಿ. ಜನರ ತೀರ್ಪನ್ನು ನಿರ್ಲಕ್ಷಿಸಿ ಸಬೂಬು ಹೇಳಲು ಬಿಜೆಪಿಗೆ ಸಾಧ್ಯವಿಲ್ಲ. ಜನ ನಮ್ಮ ಮೇಲೆ ವಿಶ್ವಾಸ ಇಡುತ್ತಿದ್ದು, ಅವರ ನಿರೀಕ್ಷೆಯಂತೆ ನಡೆಯಬೇಕಾಗುತ್ತದೆ ಎಂದು ಡಿಕೆಶಿ ತಿಳಿಸಿದರು.

ಮೇಕೆದಾಟು ಪಾದಯಾತ್ರೆ: ಮೇಕೆದಾಟು ಪಾದಯಾತ್ರೆಗೆ ತಯಾರಿ ಮಾಡುತ್ತಿದ್ದು, ನಿತ್ಯ 1 ಗಂಟೆ ನಡೆಯುತ್ತಿದ್ದೇನೆ. ಕೆಲವರು ಟೋಪಿ ಹಾಕಿದರೆ ಹಾಕಿಸಿಕೊಳ್ಳೋಣ ಎಂದು ಪರೋಕ್ಷವಾಗಿ ಎಚ್ ಡಿ ಕೆ‌ ಅವರಿಗೆ ಟಾಂಗ್ ನೀಡಿದರು.

ಚಲನಚಿತ್ರ ವಾಣಿಜ್ಯ ಮಂಡಳಿಗೂ ಭೇಟಿ ನೀಡಿದಗದು, ಅಲ್ಲಿನವರನ್ನು ಆಹ್ವಾನಿಸಿದ್ದೇನೆ. ಎಲ್ಲ ಸಂಘಟನೆಗಳು, ಕಲಾವಿದರು, ಧಾರ್ಮಿಕ ಮುಖಂಡರು ವಿದ್ಯಾರ್ಥಿಗಳು, ಅಪಾರ್ಟ್ ಮೆಂಟ್ ನಿವಾಸಿಗಳು, ಎಲ್ಲ ವರ್ಗದವರನ್ನೂ ಆಹ್ವಾನಿಸುತ್ತಿದ್ದೇನೆ ಎಂದು ತಿಳಿಸಿದರು.

ಬಿಜೆಪಿ, ದಳದವರು ತಮ್ಮ ಅನುಕೂಲಕ್ಕಾಗಿ ಟ್ವೀಟ್ ಮಾಡುತ್ತಿದ್ದಾರೆ. ಯೋಜನೆಯ ಡಿಪಿಆರ್ ನ ದಿನಾಂಕ ಸಮೇತ ದಾಖಲೆಗಳನ್ನು ನೀಡುತ್ತೇನೆ. ನಾನು ಅವರ ರೀತಿ  ಮಾತನಾಡುವುದಿಲ್ಲ. ನಾನು ಮಾತನಾಡಿದರೆ ದಾಖಲೆ ಸಮೇತ ಮಾತನಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟು, ಸ್ಥಳೀಯರ ನಿಯಂತ್ರಣಕ್ಕೆ ನೀಡುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ರಾಜ್ಯ ಸರ್ಕಾರ ಅತಿದೊಡ್ಡ ತಪ್ಪು ಮಾಡುತ್ತಿದೆ ಎಂದು ಹೇಳಿದರು.