ಮುಂದಿನ ಹೋರಾಟಕ್ಕೆ ಮತದಾರರು ಶಕ್ತಿ ತುಂಬಿದ್ದಾರೆ -ಎಚ್ ಡಿ ಕೆ

ಬೆಂಗಳೂರು: ಬಿಡದಿ ಪುರಸಭೆಯಲ್ಲಿ ಜೆಡಿಎಸ್‍ಗೆ ಸ್ಪಷ್ಟ ಬಹುಮತ ನೀಡುವ ಮೂಲಕ 2023ರ ಚುನಾವಣೆ ಗುರಿ ತಲುಪಲು ಮುಂದಿನ ಹೋರಾಟಕ್ಕೆ ಮತದಾರರು ಶಕ್ತಿ ತುಂಬಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬಿಡದಿ ಪುರಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ನಮಗೆ ರಾಜಕೀಯ ಜನ್ಮ ನೀಡಿದ ಬಿಡದಿ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಸಂಕ್ರಾಂತಿ ನಂತರ ಒಂದು ವರ್ಷ ಕಾಲ ಜನರ ವಿಶ್ವಾಸ ಗಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು‌ ಎಂದು ತಿಳಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಯ ಗುರಿ ತಲುಪಲು ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳುತೇವೆ ಎಂದು ಹೇಳಿದರು.

ಜೆಡಿಎಸ್ ಮುಳುಗೇ ಹೋಯಿತು ಎನ್ನುವವರಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು‌ ಮಾರ್ಮಿಕವಾಗಿ ನುಡಿದರು.

ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಲ್ಲಿ ರಾಯಚೂರು, ಬಿಜಾಪುರ, ಚಿಕ್ಕಮಗಳೂರು, ಶಿರಾದಲ್ಲೂ ಪಕ್ಷ ಸಾಕಷ್ಟು ಸಾಧನೆ ಮಾಡಿದೆ. ಕರಾವಳಿ ಭಾಗದ ಕಾಪುವಿನಲ್ಲಿ ಜೆಡಿಎಸ್ ಖಾತೆ ತೆರೆದಿರುವುದು ಖುಷಿ ತಂದಿದೆ ಎಂದರು.

ಬಿಡದಿ ಪುರಸಭೆ ಫಲಿತಾಂಶದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿತ್ತು. ಕಾಂಗ್ರೆಸ್ ಪಕ್ಷದ ಸಂಸದರು ಮತ್ತು ಮಾಜಿ ಶಾಸಕರು ದೊಡ್ಡಮಟ್ಟದಲ್ಲಿ ಹೋರಾಟ ಮಾಡಿದ್ದರು ಆದರೂ ನಮಗೆ ಹೆಚ್ಚು ಗೆಲುವು ‌ಸಿಕ್ಕಿದೆ‌ ಎಂದು ಹೇಳಿದರು.

ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದೆ. ಅದರಿಂದ ಏನೂ ಉಪಯೋಗವಾಗುವುದಿಲ್ಲ ಎಂದು ತಿಳಿಸಿದರು.

ಯಾರ ಅನುಮತಿಯೂ ಇಲ್ಲದೆ ಕೆಲಸ ಪ್ರಾರಂಭಿಸಬಹುದು. ಆದರೆ, ಬಿಜೆಪಿಗೆ ದುಡ್ಡಿನ ಸಮಸ್ಯೆ ಕಾಡುತ್ತಿದೆ ಎಂದು ಎಚ್‌ಡಿಕೆ ಟೀಕಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿತ್ತು. ಕಾಂಗ್ರೆಸ್ ಐದು ವರ್ಷದ ಆಡಳಿತಾವಧಿಯಲ್ಲಿ ಏಕೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ರಾಜಕೀಯಕ್ಕಾಗಿ ಮಾಡುತ್ತಿರುವ ಪಾದಯಾತ್ರೆಯಲ್ಲಿ ನಾನು ಭಾಗವಹಿಸಿ ಏನು ಮಾಡಲು ಸಾಧ್ಯ? ಪಾದಯಾತ್ರೆಯಿಂದ ಯೋಜನೆ ಪ್ರಾರಂಭವಾಗುತ್ತದೆಯೇ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಡಿದ ಪಾದಯಾತ್ರೆಗಳಿಗೂ, ಕಾಂಗ್ರೆಸ್‍ನವರು ಮಾಡಿದ ಪಾದಯಾತ್ರೆಗಳಿಗೂ  ಬಹಳ ವ್ಯತ್ಯಾಸವಿದೆ ಎಂದು ಕುಮಾರಸ್ವಾಮಿ ಹೇಳಿದರು.