ಬೆಂಗಳೂರು: ಕೊರೊನಾ ಎರಡನೆ ಅಲೆ ಸಂದರ್ಭದಲ್ಲಿ ಸೋಂಕಿತರನ್ನು ಅವಶ್ಯಕತೆಗಿಂತ ಹೆಚ್ಚು ಸಮಯ ಆಸ್ಪತ್ರೆಗಳಲ್ಲಿರಿಸಿ ವಂಚಿಸಿದ್ದ ಖಾಸಗಿ ಆಸ್ಪತ್ರೆಗಳ ಧನ ದಾಹಕ್ಕೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿನ ಜೊತೆಗೆ ಕೊರೊನಾ ಪ್ರಕರಣಗಳೂ ಹೆಚ್ಚಾಗುತ್ತಿದೆ. ಯಾವುದೆ ಸಮಯದಲ್ಲಿ ಮೂರನೆ ಅಲೆ ಕಾಣಿಸಿಕೊಳ್ಳಬಹುದು ಎಂಬ ಆತಂಕ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಇಲಾಖೆ
ಎಚ್ಚೆತ್ತುಕೊಂಡಿದೆ.
ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಸೋಂಕಿತರ ಜೇಬಿಗೆ ಕತ್ತರಿ ಹಾಕುವ ಖಾಸಗಿ ಆಸ್ಪತ್ರೆಗಳಿಗಾಗಿ ಪ್ರತ್ಯೇಕ ಮಾರ್ಗಸೂಚಿ ರಚನೆ ಮಾಡಿದ್ದಾರೆ.
ಪಾಸಿಟಿವ್ ಕಾಣಿಸಿಕೊಂಡ 10 ದಿನಕ್ಕೆ ಸೋಂಕಿನ ಗುಣಲಕ್ಷಣವಿಲ್ಲದಿದ್ದರೆ ಸೋಂಕಿತರನ್ನು ಡಿಸ್ಚಾರ್ಜ್ ಮಾಡಬಹುದು.
ಸೋಂಕಿತರಿಗೆ ರೋಗದ ಲಕ್ಷಣ ಕಡಿಮೆ ಆದರೆ ಡಿಸ್ಚಾರ್ಜ್ ಮಾಡಿ ಮನೆಯಲ್ಲಿ ಹೋಂ ಕ್ವಾರಂಟೈನ್ ಮಾಡಬಹುದು.
ಗುಣ ಲಕ್ಷಣ ಇಲ್ಲದ ಸೋಂಕಿತರನ್ನು ಹತ್ತಕ್ಕಿಂತ ಹೆಚ್ಚು ದಿನ ಆಸ್ಪತ್ರೆಗಳಲ್ಲಿ ಉಳಿಸಿಕೊಳ್ಳಬಾರದು.
ಸರ್ಕಾರ ನಿಗಪಡಿಸಿರುವ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಬಾರದು ಎಂದು ಮಾರ್ಗಸೂಚಿಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಕೊರೊನಾ ಎರಡನೆ ಅಲೆ ಸಂದರ್ಭದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಉಳಿಸಿಕೊಂಡು ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದವು.
ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಮೂರನೆ ಅಲೆ ಆರಂಭಕ್ಕೂ ಮುನ್ನವೆ ಖಾಸಗಿ ಆಸ್ಪತ್ರೆಗಳ ಹಣದಾಹಕ್ಕೆ ಕಡಿವಾಣ ಹಾಕುತ್ತಿದೆ.
ಕೊರೊನಾ ಆಸ್ಪತ್ರೆಗಳ ಸಂಖ್ಯೆ ಏರಿಕೆ: ಎರಡನೆ ಅಲೆ ತೀವ್ರತೆ ಕಡಿಮೆಯಾದ ನಂತರ ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಕೇವಲ ಬೌರಿಂಗ್ ಆಸ್ಪತ್ರೆಯನ್ನು ಮೀಸಲಿಡಲಾಗಿತ್ತು. ಕೆಲ ದಿನಗಳ ಹಿಂದೆ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆ ರಾಜೀವ್‍ಗಾಂ ಎದೆರೋಗ ಆಸ್ಪತ್ರೆಯನ್ನು ಮೀಸಲಿಡಲಾಯಿತು.
ಇದೀಗ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಸಿವಿರಾಮನ್ ಆಸ್ಪತ್ರೆಯನ್ನು ಕೊರೊನಾ ಚಿಕಿತ್ಸಗೆ ಮೀಸಲಿಡಲಾಗಿದೆ.

