ಬೆಂಗಳೂರು: ದೇಶದಲ್ಲಿ ಕೋವಿಡ್ 3ನೇ ಅಲೆ ಬರಬಹುದೆಂದು ತಜ್ಞರು ಎಚ್ಚರಿಕೆ ನೀಡಿರುವುದರಿಂದ ಇದರ ತಡೆಗೆ ರಾಜ್ಯದಲ್ಲಿ ಪೂರ್ವ ಸಿದ್ದತೆಗಳನ್ನು ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಸಿಎಂ ಮಾತನಾಡಿದರು.
ಕಳೆದ ಒಂದು ವಾರದಿಂದ ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಯ ಮುನ್ಸೂಚನೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಆದ್ದರಿಂದ ನಾವು ಕೂಡ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಐಸಿಯು, ಬೆಡ್ ಸಂಖ್ಯೆ ಹೆಚ್ಚಳ, ಆಕ್ಸಿಜನ್ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ತಜ್ಞರ ಸಲಹೆ ಹಿನ್ನೆಲೆಯಲ್ಲಿ ಏನೆಲ್ಲ ಎಚ್ಚರಗಳನ್ನು ವಹಿಸಬೇಕೋ ಅದೆಲ್ಲವನ್ನೂ ತೆಗೆದುಕೊಂಡಿದ್ದೇವೆ. ಕೋವಿಡ್ ನಿಯಂತ್ರಿಸಲು ಸರ್ಕಾರ ಸರ್ವಸನ್ನದ್ದವಾಗಿದೆ ಎಂದು ಸ್ಪಷ್ಟಪಡಿಸಿದರು.
ಡಿಕೆಶಿಗೆ ತಿರುಗೇಟು: ಹಿಂದೂ ದೇವಾಲಯಗಳನ್ನು ಆರ್‍ಎಸ್‍ಎಸ್‍ನವರಿಗೆ ನೀಡಲು ಸರ್ಕಾರ ಮುಂದಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬೆಕ್ಕಿನ ಕಣ್ಣಿಗೆ ಯಾವಾಗಲೂ ಇಲಿಯೇ ಕಾಣುತ್ತದೆ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.
ನಾವು ಯಾವುದೇ ದೇವಾಲಯಗಳನ್ನು ಯಾರಿಗೂ ಹಸ್ತಾಂತರ ಮಾಡುವುದಿಲ್ಲ. ದೇವಾಲಯಗಳು ಸ್ವತಂತ್ರವಾಗಿ ತಮ್ಮ ಆದಾಯದಲ್ಲೇ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಕಾಯ್ದೆ ರೂಪಿಸುತ್ತಿದ್ದೇವೆ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು.
ಹೊಸ ವರ್ಷದ ಶುಭಾಷಯ: ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಜನತೆಗೆ ಹೊಸ ವರ್ಷದ ಶುಭಾಷಯ ಕೋರಿದರು.
ಈ ವರ್ಷದಲ್ಲಿ ಎಲ್ಲ ಸಂಕಷ್ಟಗಳಿಂದ ಜನತೆ ಮುಕ್ತವಾಗಲಿ. ಹೊಸ ವರ್ಷವು ಹೊಸ ಚೈತನ್ಯ ತಂದು ಪ್ರತಿಯೊಬ್ಬರ ಜೀವನವು ಹಸನ್ಮುಖವಾಗಲಿ. ಕೋವಿಡ್ ಸೇರಿದಂತೆ ಎಲ್ಲ ಸಾಂಕ್ರಾಮಿಕ ರೋಗಗಳಿಂದ ಕರ್ನಾಟಕ ಮುಕ್ತವಾಗಲಿ ಎಂದು ಮುಖ್ಯ ಮಂತ್ರಿ ತಿಳಿಸಿದರು.

