ಮೈಸೂರು:ರಾಜ್ಯದ ಹಿತಕ್ಕೋಸ್ಕರ,ಜನರ ಕುಡಿಯುವ ನೀರಿಗೋಸ್ಕರ ಹಾಗೂ ಕಾವೇರಿ ಜಲಾನಯನ ಪ್ರದೇಶದ ರೈತರಿಗಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಡಿ.ಕೆ.ಶಿವಕುಮಾರ್ ಸೋಮವಾರ ಮುಂಜಾನೆ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶುಭಕಾರ್ಯ ನಡೆಸುವ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಮೇಕೆದಾಟು ಪಾದಯಾತ್ರೆಗೂ ಮುನ್ನ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದೇವೆ ಎಂದು ಹೇಳಿದರು.
ಚಾಮುಂಡಿ ತಾಯಿಗೆ ತನ್ನದೇ ಆದ ಶಕ್ತಿ ಇದೆ. ಎಲ್ಲ ಅಡಚಣೆಗಳನ್ನು ತಾಯಿ ಸಂಹಾರ ಮಾಡುತ್ತಾಳೆಂಬ ನಂಬಿಕೆ ಇದೆ ಎಂದು ಹೇಳಿದರು.
ಇದು ಮೈಸೂರು ಜಿಲ್ಲೆಯ ಜನತೆ ಹಕ್ಕು. ಬೆಂಗಳೂರು ಜಿಲ್ಲೆಯ ಜನತೆಯ ಹಕ್ಕು. ಮೈಸೂರು-ಬೆಂಗಳೂರು ಸೇರಿರುವ ಸಂಗಮ ಸ್ಥಳವೇ ಮೇಕೆದಾಟು ಕನಕಪುರದ ಎಡಭಾಗ.ಮೈಸೂರು ಬಲಭಾಗ. ಈಗೆಲ್ಲ ಹೊಸದಾಗಿ ರಾಮನಗರ, ಚಾಮರಾಜನಗರ ಅಂತ ಹೆಸರಿಟ್ಟುಕೊಂಡಿದ್ದೇವೆ ಅದು ಬೇರೆ ವಿಷಯ. ಇವೆರಡು ಸೇರಿ ಮೇಕೆದಾಟು ಎಂದು ತಿಳಿಸಿದರು.
ಕೋರೋನಾ ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಪಾದಯಾತ್ರೆ ಎಷ್ಟು ಸರಿ ಎಂದು ಪ್ರಶ್ನಿಸಿದ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ವಾಜಪೇಯಿಯವರ ಅವಧಿಯಲ್ಲಿ ಅಡ್ವಾನಿಯವರು ರಥಯಾತ್ರೆ ಮಾಡಿದರು ಅದನ್ನು ಏನಂತ ಕರೆದಿರಿ ಎಂದು ಪ್ರಶ್ನಿಸಿದರು.
ಹಿಂದೆ ಬೇಕಾದಷ್ಟು ಯಾತ್ರೆಗಳನ್ನು ದೇವೇಗೌಡರು ಮಾಡಿದರು. ಕುಣಿಗಲ್ ನಿಂದ ಬೇರೆ ಬೇರೆ ಕಡೆಯಿಂದ ಮಾಡಿದರು ಅದನ್ನು ಏನಂತ ಕರೆದಿರಿ ಕುಮಾರಸ್ವಾಮಿಯವರು ಇಡೀ ರಾಜ್ಯಕ್ಕೆ ಓಡಾಡುತ್ತೇವೆ ಅಂತೆಲ್ಲ ಹೇಳಿದರು ಅದಕ್ಕೆ ಏನಂತ ಕರೆತೀರಿ ಮರು ಪ್ರಶ್ನೆ ಮಾಡಿದರು.
ಯಡಿಯೂರಪ್ಪನವರು ಐದು ಭಾಗ ಮಾಡಿ ಐದು ಮಂದಿ ಮಂತ್ರಿಗಳು ಮೊನ್ನೆ ತಾನೇ ಮಂತ್ರಿಯಾದ ತಕ್ಷಣ ಓಡಾಟ ನಡೆಸಿದರು.
ಆಗೆಲ್ಲ ಕೊರೋನಾ ಇರಲಿಲ್ಲವೋ, ಚುನಾವಣಾ ಸಮಯದಲ್ಲಿ ಕೊರೋನಾ ಇರಲಿಲ್ಲವೋ ಎಂದು ಪ್ರಶ್ನಿಸಿದ ಅವರು ಅದಕ್ಕೆ ಏನಂತ ಕರೆಯುತ್ತೀರಿ, ಅದೆಲ್ಲ ನಿಮಗೇ ಬಿಟ್ಟಿದ್ದು ಎಂದರು.

