ಮೈಸೂರು: ಕೋವಿಡ್ ನೆಪ ಹೇಳಿಕೊಂಡು ಮೇಕೆದಾಟು ಪಾದಯಾತ್ರೆ ತಡೆಗಟ್ಟಲು ಸರ್ಕಾರ ಪ್ರಯತ್ನಿಸುವ ಸಾಧ್ಯತೆ ಇದೆ.ಹಾಗಾಗಿ ನಾವು ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಪಾದಯಾತ್ರೆ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅವರು ಏನು ಬೇಕಾದರೂ ಮಾಡಿಕೊಳ್ಳಲಿ.
ನಾವಂತೂ ಪಾದಯಾತ್ರೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆ ಸಂಬಂಧ ನಡೆಸಿದ ಹೋರಾಟವನ್ನು ಕಾಂಗ್ರೆಸ್ ಪಕ್ಷ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ. ಈ ವಿಚಾರದಲ್ಲಿ ಜೆಡಿಸ್ ನವರು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮೇಕೆದಾಟು ಹೊಸ ಯೋಜನೆಯೇನಲ್ಲ, ಬಹಳ ಹಳೆಯದಾದ ಯೋಜನೆ.
1968 ರಲ್ಲಿ ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಕಾಂಗ್ರೆಸ್ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿತ್ತು.
ಆದರೆ ಹಲವಾರು ಕಾರಣಗಳಿಂದ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ ಎಂದು ತಿಳಿಸಿದರು.
ಈಗ ಯೋಜನೆಯನ್ನು
ತ್ವರಿತವಾಗಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಜನವರಿ 9 ರಿಂದ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಹೇಳಿದರು.
ಆದರೆ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡ್ತಿದೆ, ಅವರ ಅಧಿಕಾರಾವಧಿಯಲ್ಲಿ ಯೋಜನೆ ಮಾಡಿಲ್ಲ, ಇದು ಗಿಮಿಕ್ ಎನ್ನುತ್ತಿದ್ದಾರೆ ಹೆಚ್ ಡಿ ಕುಮಾರಸ್ವಾಮಿ. ಅವರು ಬಹಳ ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ನಾವು ಸರ್ಕಾರವನ್ನು ಎಚ್ಚರಿಸುವಂತಹ ಕೆಲಸ ಮಾಡುತ್ತಾ ಬಂದಿದ್ದೇವೆ. ನಮ್ಮ ಎಲ್ಲಾ ಹೋರಾಟಗಳು ಫಲಪ್ರದವಾಗುತ್ತಿವೆ. ಇದು ದಪ್ಪ ಚರ್ಮದ ಸರ್ಕಾರ. ಹೀಗಾಗಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದೇವೆ ಎಂದರು.
ಇತ್ತೀಚೆಗೆ ನಡೆದ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ಆಡಳಿತ ಪಕ್ಷ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಮುನ್ನೆಲೆಗೆ ಬಂದಿದೆ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದು ವಿಶ್ವಾಸ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಪಾದಯಾತ್ರೆಯನ್ನು ರಾಜಕಾರಣಕ್ಕಾಗಿ ಎಂದು ಬಿಂಬಿಸುತ್ತಿದ್ದಾರೆ.
ನಮಗೆ ಅಧಿಕಾರ ಒಂದೇ ಮುಖ್ಯವಲ್ಲ. ನಮಗೆ ಸಾಮಾಜಿಕ ಕಳಕಳಿಯಿದೆ. ಬಹುತೇಕ ವಿಷಯಗಳಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲೂ ನಾವು ಹೋರಾಟ ಮಾಡಿದ್ದೇವೆ.
ಕುಡಿಯುವ ನೀರು ಯೋಜನೆಗೆ ಎನ್ ಒ ಸಿ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ. ಕೇವಲ ಪರಿಸರ ಇಲಾಖೆಯ ಅನಮತಿ ಅಗತ್ಯವಿದೆ. ಮೇಕೆದಾಟು ಯೋಜನೆಯ ಸ್ಥಳ ಒಂದು ಬೆಂಗಳೂರು, ಮತ್ತೊಂದು ಮೈಸೂರು ಜಿಲ್ಲೆಯನ್ನು ಒಳಗೊಂಡಿತ್ತು.
ನಂತರದ ದಿನಗಳಲ್ಲಿ ರಾಮನಗರ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಗೆ ಒಳಗೊಂಡಿದೆ. ರಾಮನಗರ ಜಿಲ್ಲೆಯ ಕನಕಪುರ ಹಾಗೂ ಚಾಮರಾಜನಗರ ಜಿಲ್ಲೆಯ ಹನೂರಿನ ನಡುವೆ ಈ ಯೋಜನೆ ಬರಲಿದೆ.
ನಮ್ಮ ಪಾದಯಾತ್ರೆಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಆದರೆ ನಾವು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಈ ಹೋರಾಟದಲ್ಲಿ ಭಾಗಿಯಾಗುವಂತೆ ಸಮಾಜದ ಎಲ್ಲಾ ಸ್ಥಳದ ಮುಖಂಡರು, ನಾಯಕರು, ಮಠಾಧಿಪತಿಗಳು, ಹಾಲಿ ಮಾಜಿ ಶಾಸಕರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದೇವೆ. ಹೋರಾಟದ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿದೆ.
ಯೋಜನೆ ಅನುಷ್ಠಾನಕ್ಕೆ ಬರದಂತೆ ತಡೆಯಲು ತಮಿಳುನಾಡಿನವರಿಗೆ ಬಿಜೆಪಿ ಯವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ.ಹಾಗಾಗಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜನವರಿ 9 ರಿಂದ ಪಾದಯಾತ್ರೆ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಾಜಕೀಯ ಚಿತಾವಣೆಯಿಂದ ಮೇಕೆದಾಟು ಯೋಜನೆ ವಿರೋಧಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡಿನವರನ್ನು, ಅಣ್ಣಾಮಲೈಯನ್ನು ಎತ್ತಿಕಟ್ಟುತ್ತಿರುವವರೇ ಬಿಜೆಪಿಯವರು ಎಂದು ಸಿದ್ದು ದೂರಿದರು.
ತಮಿಳುನಾಡಿಗೆ ಬಿಜೆಪಿ ಯವರು ಬೆಂಬಲ ನೀಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಮರೆ ಮಾಚಲು ಕಾಂಗ್ರೆಸ್ ವಿರುದ್ದ ಆರೋಪ ಮಾಡುತ್ತಿದ್ದಾರೆ.
ಮೇಕೆದಾಟು ಯೋಜನೆ ವಿಳಂಬವಾಗಲು ಬಿಜೆಪಿ ಯವರೇ ಕಾರಣರ ಎಂದರು.
ತಮಿಳುನಾಡಿನವರು ರಾಜಕೀಯ ಕಾರಣಕ್ಕಾಗಿ ಖ್ಯಾತೆ ತೆಗೆಯುತ್ತಿದ್ದಾರೆ. ಈಗಿನ ಪರಿಸ್ಥಿಯಲ್ಲಿ ಮೇಕೆದಾಟು ಯೋಜನೆಯನ್ನು ತಡೆಯಲು ತಮಿಳುನಾಡಿನವರಿಗೆ ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವ ನಾರಾಯಣ್ , ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಉಪಸ್ಥಿತರಿದ್ದರು.

