ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು: ಸೋಂಕು ಕಡಿಮೆಯಿದ್ದಾಗ ರಾಜಕೀಯ ಕಾರಣಗಳಿಗಾಗಿ ವಾರಾಂತ್ಯದ ನಿರ್ಬಂಧ ಜಾರಿ ಮಾಡಿದ್ದ ರಾಜ್ಯ ಸರ್ಕಾರ, ಸೋಂಕು ಹೆಚ್ಚಾಗಿರುವಾಗ ನಿರ್ಬಂಧವನ್ನು ತೆಗೆದು ಹಾಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,

ನಾನು ಈ ಮೊದಲೇ ಹೇಳಿದಂತೆ ಇದು ಬಿಜೆಪಿಯ ಲಾಕ್‍ಡೌನ್ ಮತ್ತು ಕರ್ಫ್ಯೂ.ತಮಗೆ ಬೇಕಾದಾಗ ಹಾಕಬಹುದು ಇಲ್ಲ ತಗೀಬಹುದು ಎಂದು ವಾಗ್ದಾಳಿ ನಡೆಸಿದರು.

ನಾವು ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಆರಂಭಿಸಿದಾಗ ಅದಕ್ಕೆ ತೊಂದರೆ ಕೊಡುವ ಸಲುವಾಗಿ ವಾರಾಂತ್ಯದ ನಿರ್ಬಂಧ ಜಾರಿಗೆ ತಂದರು.

ಆಗ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಇತ್ತು. ನಮ್ಮ ಮೇಲಿನ ದ್ವೇಷಕ್ಕಾಗಿ ಲಾಕ್‍ಡೌನ್ ಜಾರಿ ಮಾಡಿ ಜನರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಮಾಡಿದರು. ಈಗ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಆದರೂ ಲಾಕ್‍ಡೌನ್ ತೆರವು ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದರ ಹಿಂದೆ ರಾಜಕೀಯ ದುರುದ್ದೇಶವಿದೆಯೋ ಹೊರತು ಜನರ ಹಿತಾಸಕ್ತಿ ಇಲ್ಲ. ನಮ್ಮ ಪಾದಯಾತ್ರೆಯನ್ನು ತಡೆಯಲು ಜನರಿಗೆ ಸರ್ಕಾರ ಕಿರುಕುಳ ನೀಡಿತ್ತು ಎಂದು ಕಿಡಿಕಾರಿದರು.

ಸರ್ಕಾರದ  ಕ್ರಮಗಳಿಂದ ಜನರ ಆದಾಯ ಕುಸಿತವಾಗಿದೆ. ಜನರಲ್ಲಿ ದುಡ್ಡಿಲ್ಲದ ವೇಳೆ ಹಾಲು ಮತ್ತು ವಿದ್ಯುತ್ ದರ ಏರಿಕೆಯಂತಹ ಜನ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರ ಮೊದಲು ಜನರ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿ. ನಂತರ ಏನಾದರೂ ಮಾಡಿಕೊಳ್ಳಲಿ ಎಂದು ಹೇಳಿದರು.

ಸಾರಿಗೆ ಬಸ್, ಮೆಟ್ರೋಗಳಲ್ಲಿ ಪೂರ್ಣ ಪ್ರಮಾಣದ ಜನ ಸಂಚಾರ ಮಾಡಬಹು ಎಂಬ ನಿಯಮ ಇದೆ. ಆದರೆ, ಹೊಟೇಲ್‍ಗಳು, ಥಿಯೆಟರ್‍ಗಳಲ್ಲಿ ಮಾತ್ರ ಅರ್ಧದಷ್ಟು ಸೀಟುಗಳ ಭರ್ತಿಗೆ ನಿಯಮ ಪಾಲನೆ ಮಾಡಬೇಕಿದೆ. ಕುಟುಂಬ ಒಟ್ಟಾಗಿ ಹೋದಾಗ 50:50 ಸೀಟು ನಿಯಮ ಪಾಲನೆ ಮಾಡಲು ಸಾಧ್ಯವೆ, ಅವೈಜ್ಞಾನಿಕವಾದ ನಿಯಮಗಳನ್ನು ಮಾಡಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತಮಿಳು ನಾಡು ಹೋಗೆನಕಲ್ ಬಳಿ ಎರಡನೇ ಹಂತದ ಯೋಜನೆ ಜಾರಿಗೊಳಿಸಲು ಮುಂದಾಗಿರುವುದಕ್ಕೆ ಸದ್ಯಕ್ಕೆ ತಾವು ಪ್ರತಿಕ್ರಿಯಿಸುವುದಿಲ್ಲ. ಸರ್ಕಾರದವರು ಮೊದಲು ಏನು ಹೇಳುತ್ತಾರೋ ಹೇಳಲಿ. ನಂತರ ನಾನು ಮಾತನಾಡುತ್ತೇನೆ ಎಂದು ಡಿಕೆಶಿ ಹೇಳಿದರು.