ಬೆಂಗಳೂರು:ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ದ ಸೈನ್ಯ ಕಟ್ಟಿದ ಅಪ್ರತಿಮ ನಾಯಕ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನೋತ್ಸವದ ಪ್ರಯುಕ್ತ ವಿಧಾನ ಸೌಧದ ಆವರಣದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಎಂ ಮಾತನಾಡಿದರು.
ಭಾರತದಲ್ಲಿ ಸಂಘಟನೆ ಮಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷರ ಪಾತ್ರ ದೊಡ್ಡದು, ಅಜಾಧ್ ಹಿಂದ್ ಫೌಜ್‌ನಲ್ಲಿ 60 ಸಾವಿರ ಯುವಕರನ್ನು ತೊಡಗಿಸಿಕೊಂಡರು, ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಭದ್ರ ಬುನಾದಿ ಹಾಕಿದರು ಎಂದು ಹೇಳಿದರು.
ದೇಶಭಕ್ತಿ,ದೇಶಕ್ಕಾಗಿ ತ್ಯಾಗ ಮಾಡುವ ಅವರ ಧ್ಯೇಯವನ್ನು ಯುವಕರಲ್ಲಿ ಬಿತ್ತಬೇಕಿದೆ.
ಈ ಹಿನ್ನೆಲೆಯಲ್ಲಿ ಇಡೀ ವರ್ಷ ನೇತಾಜಿಯವರ ಹುಟ್ಟುಹಬ್ಬವನ್ನು ಕಾಲೇಜಿನಲ್ಲಿ ಡಿಬೇಟ್,ವಸ್ತುಪ್ರದರ್ಶನ ಮೂಲಕ ಮಾಡಲಾಗುವುದು ಎಂದು ತಿಳಿಸಿದರು.
ನೇತಾಜಿಯವರ ಕೃತಿಗಳನ್ನು ಕನ್ನಡದಲ್ಲಿ ಮುದ್ರಣ ಮಾಡುವ ಕೆಲಸ ಮಾಡುತ್ತೇವೆ, ಒಂದು ವರ್ಷದೊಳಗೆ ವಿಧಾನಸೌಧ ಗಮಕ ಮುಂದೆ ನೇತಾಜಿಯವರ ಪ್ರತಿಮೆಯನ್ನು ಸ್ಥಾಪನೆ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಇಷ್ಟು ದಿನ ಬಂದ್ ಆಗಿದ್ದ ವೈಮಾನಿಕ ಶಾಲೆಯನ್ನು ಪುನರ್ ಚಾಲನೆ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು.

