ಮೈಸೂರು: ದೇವರಾಣೆ, ನಮ್ಮ ಅಪ್ಪನಾಣೆ ಮೇಕೆದಾಟು ಯೋಜನೆಯನ್ನು ಮಾಡುವುದು ನಾವೇ. ಇದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಮೈಸೂರು ಪ್ರವಾಸದಲ್ಲಿರುವ ಸಚಿವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೇಪಿ ಸರ್ಕಾರಗಳಿವೆ. ರಾಜ್ಯ ಸರ್ಕಾರದಲ್ಲಿ ಯಾವ ಅಭದ್ರತೆಯೂ ಇಲ್ಲ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ.ಅದರ ಬಗ್ಗೆ ಯಾರಿಗೂ ಯೋಚನೆ ಬೇಡ ಎಂದು ಹೇಳಿದರು.
ಕೆಲವು ಶಾಸಕರು ವೈಯುಕ್ತಿಕವಾಗಿ ಕೂತು ಮಾತನಾಡಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬಾರದು. ಕೆಲವರಿಗೆ ಸಂಜೆಯಾದರೆ ಅಲ್ಲಿ ಇಲ್ಲಿ ಕುಳಿತು ಮಾತನಾಡುವ ಅಭ್ಯಾಸವಿರುತ್ತದೆ. ಅದು ಅವರ ವೈಯುಕ್ತಿಕ ವಿಚಾರ. ನನಗೆ ಅಂತಹ ಯಾವ ಅಭ್ಯಾಸಗಳೂ ಟ್ರೈನಿಂಗ್ ಇಲ್ಲ ಎಂದರು.
ರಾಜ್ಯದಲ್ಲಿ ವಸತಿ ಇಲಾಖೆಯಿಂದ ಮನೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು ಮಾಡಿದ ತಪ್ಪು ಸರಿಪಡಿಸಿದ್ದೇವೆ. ಇಲ್ಲಿತನಕ ಒಂದೂ ಮನೆ ಕೊಟ್ಟಿಲ್ಲ ಅಂತ ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ ಮನೆ ಕೊಡಲು ನೀವು ಬಿಟ್ಟಿಲ್ಲ ಎಂದು ಟಾಂಗ್ ನೀಡಿದರು.
ನಾನಾಗಿರುವುದಕ್ಕೆ ಅಡೆ ತಡೆ ಬಗೆಹರಿಸಿದ್ದೇನೆ. ಕೇಂದ್ರದ ಆ್ಯಪ್ ನಲ್ಲಿ ಎಂಟ್ರಿ ಮಾಡಬೇಕಿತ್ತು. ರಾಜ್ಯ ಸರ್ಕಾರ ತಮ್ಮದೇ ಆ್ಯಪ್ ಮಾಡಿ ಫೀಡ್ ಮಾಡಿತ್ತು. ಇದು ಸಿದ್ದರಾಮಯ್ಯ ಅವರ ಕಾಲದಲ್ಲಿ ಆಗಿದ್ದ ಎಡವಟ್ಟು ಎಂದು ಸೋಮಣ್ಣ ಸ್ಪಷ್ಟಪಡಿಸಿದರು.
ಮಾತು ಮನೆ ಕೆಡಿಸಿತು ಅನ್ನೋ ಮಾತಿನಂತೆ ಸಿದ್ದರಾಮಯ್ಯ ಮಾತನಾಡುತ್ತಾರೆ ಅಷ್ಟೇ. ಅವರಿಗೆ ಸಮರ್ಪಕವಾದ ಮಾಹಿತಿ ಇಲ್ಲ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಇಂತಹ ಯಾವುದೇ ವಿಚಾರ ಇಲ್ಲ. 2023ರ ಚುನಾವಣೆ ಸಹ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ. ಈ ಬಗ್ಗೆ ವರಿಷ್ಠರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. 6 ತಿಂಗಳು ಪೂರೈಸಿದ್ದಾರೆ. ಅವರ ನೇತೃತ್ವದಲ್ಲಿ ಮಾಡಿದ ಕೆಲಸವನ್ನು ಹೇಳುತ್ತೇವೆ. ಸಚಿವ ಸಂಪುಟ ವಿಚಾರ ಏನು ಆಗುತ್ತೆ ಅನ್ನೋದಕ್ಕಿಂತ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸೋಮಣ್ಣ ಹೇಳಿದರು.

