ಜಿಲ್ಲಾ ಉಸ್ತುವಾರಿ ಹಂಚಿಕೆ: ನಮ್ಮ ಸರ್ಕಾರದಲ್ಲಿ ಹೊಸ ಪದ್ಧತಿ –ಅಶ್ವಥ್ ನಾರಾಯಣ

ಬೆಂಗಳೂರು:ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರವಾಗಿ ನಮ್ಮ ಸರ್ಕಾರದಲ್ಲಿ ಹೊಸ ಪದ್ಧತಿ ತರಲಾಗಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವರ ತವರು ಜಿಲ್ಲೆಯಾದರೆ ಅವರದ್ದೇ ಯೋಚನೆ, ಗುಂಪು, ಲೈಕ್ಸ್, ಡಿಸ್ ಲೈಕ್ಸ್, ದೂರುಗಳು ಇದ್ದೇ ಇರುತ್ತದೆ. ತಟಸ್ಥ(ನ್ಯೂಟ್ರಲ್) ವ್ಯಕ್ತಿ ಬೇಕು ಎಂಬ ಕಾರಣಕ್ಕೆ ಬೇರೆ ಜಿಲ್ಲೆಗಳನ್ನು ಕೊಡಲಾಗಿದೆ ಎಂದು ಹೇಳಿದರು.

ರಾಮನಗರ ಜಿಲ್ಲೆ ಉಸ್ತುವಾರಿ ನೀಡುವಂತೆ ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡಿರಲಿಲ್ಲ.ಹೊಸ ಪ್ರಯತ್ನದಲ್ಲಿ ಇದುವರೆಗೆ ಇದ್ದ ಸವಾಲುಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರನ್ನು ಎದುರಿಸಲು ನನಗೆ ರಾಮನಗರ ಜಿಲ್ಲಾಉಸ್ತುವಾರಿ ಮುಂದುವರೆಸಿಲ್ಲ. ನಾನು ಬೆಂಗಳೂರಿನಿಂದ ಆಯ್ಕೆ ಆಗಿ ರಾಮನಗರದಲ್ಲಿ ಉಸ್ತುವಾರಿ ನಿರ್ವಹಿಸಲು ಫಿಟ್ ಆಗುತ್ತೇನೆ ಎಂಬ ಕಾರಣ ಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು.

ನಾನು ಈಗಾಗಲೇ ಎರಡೂವರೆ ವರ್ಷದಿಂದ ರಾಮನಗರ ಉಸ್ತುವಾರಿ ನಿರ್ವಹಿಸಿದ್ದೇನೆ, ಸಚಿವರಾದ ಅಶೋಕ್ ಮತ್ತು ಮಾಧುಸ್ವಾಮಿ ಅವರಿಗೆ ಜಿಲ್ಲಾ ಉಸ್ತುವಾರಿ ಯಾವ ಕಾರಣಕ್ಕೆ ನೀಡಿಲ್ಲ ಎಂಬುದು ನನಗೆ ಗೊತ್ತಿಲ್ಲ ಎಂದು ಅಶ್ವಥ್ ನಾರಾಯಣ ಹೇಳಿದರು.

ಇವರಿಬ್ಬರಿಗೆ ಜಿಲ್ಲಾ ಉಸ್ತುವಾರಿ ಇಷ್ಟ ಇತ್ತೋ ಇಲ್ಲವೋ, ಯಾವ ಜಿಲ್ಲೆ ಬೇಕಾಗಿತ್ತೋ ಗೊತ್ತಿಲ್ಲ. ಯಾರಿಗೆ ಯಾವ ಜಿಲ್ಲೆ ವಹಿಸಬೇಕು ಎಂಬುದರ ಬಗ್ಗೆ ಸಿಎಂ ಬೊಮ್ಮಾಯಿ ಅವರೇ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.