ಮಾ.28ರಿಂದ ಎಸ್ಎಸ್ಎಲ್ಸಿ, ಏ.16ರಿಂದ ಪಿಯುಸಿ ಪರೀಕ್ಷೆ

ಬೆಂಗಳೂರು:ಪಿಯುಸಿ , ಎಸ್‍ಎಸ್‍ಎಲ್‍ಸಿ ಪರೀಕ್ಷೆ ಗಳು ನಿಗದಿತ ವೇಳಾ ಪಟ್ಟಿಯಂತೆಯೇ ನಡೆಯಲಿವೆ.

ತಾತ್ಕಾಲಿಕ ಪರೀಕ್ಷೆ ವೇಳಾಪಟ್ಟಿಯಂತೆಯೇ ಅಂತಿಮ ಪರೀಕ್ಷೆಗಳು ನಡೆಯಲಿವೆ.

ಕಳೆದ ಸಾಲಿನಲ್ಲಿ ಕೊರೋನಾ ತೀವ್ರಗೊಂಡ ಹಿನ್ನಲೆಯಲ್ಲಿ ಪರೀಕ್ಷೆಗಳು ನಡೆದಿರಲಿಲ್ಲ. ಆದರೆ ಈಬಾರಿ ಪಿಯುಸಿ , ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.

ಕೊರೋನಾ ನಡುವೆಯೂ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆಗಳು ನಡೆಯಲಿವೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್.ಸ್ನೇಹಲ್ ಸ್ಪಷ್ಟನೆ ನೀಡಿದ್ದಾರೆ.

ಮಾರ್ಚಿ 28ರಿಂದ ಏಪ್ರಿಲ್ ‌11ರ ತನಕ ಎಸ್‌ಎಸ್ ಎಲ್ ಸಿ ಪರೀಕ್ಷೆ ಗಳು ನಡೆದರೆ, ಏಪ್ರಿಲ್ 16 ರಿಂದ ಮೇ 4 ರವರೆಗೆ ಪಿಯು ಪರೀಕ್ಷೆಗಳು ನಡೆಯಲಿವೆ.

ಕಳೆದ ವರ್ಷದಂತೆ ಭಾಷಾ ವಿಷಯದಲ್ಲಿ ಶೇ. 30 ರಷ್ಟು ಪಠ್ಯ ಕಡಿತ ಮಾಡಲಾಗಿದೆ. ಐಚ್ಛಿಕ ವಿಷಯಗಳಲ್ಲಿ ಯಾವುದೇ ಪಠ್ಯ ಕಡಿತವಿಲ್ಲ.

ಐಚ್ಛಿಕ ,ಭಾಷಾ ಕೋರ್ ವಿಷಯದಲ್ಲಿ ಬಹು ಆಯ್ಕೆ ಪ್ರಶ್ನೆ ಇರಲಿದೆ. ಈ ಮೊದಲು ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆ ಇರುತ್ತಿರಲಿಲ್ಲ.

ಪಿಯು ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಣೆ ಮಾಡಲಾಗಿದ್ದು‌ ಪಿಯುಸಿ ಪರೀಕ್ಷೆಗೆ ಖಾಸಗಿ ವಿದ್ಯಾರ್ಥಿಗಳಿಗೆ ನೋಂದಣಿಗೆ ಜನವರಿ 31ರವರೆಗೆ ಅವಕಾಶ ನೀಡಲಾಗಿದೆ.