ಹಕ್ಕುಗಳ ಜೊತೆಗೆ ಕರ್ತವ್ಯವನ್ನು ಪಾಲಿಸಲು ಗಮನ ಹರಿಸಬೇಕು -ಕಾಗೇರಿ

ಬೆಂಗಳೂರು:ಸಂವಿಧಾನದತ್ತವಾದ ಹಕ್ಕುಗಳಿಗೆ ಮಾತ್ರ ಒತ್ತಾಯಿಸದೆ, ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯವನ್ನು ಪಾಲಿಸಲು ಗಮನ ಹರಿಸಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.

73ನೇ ಗಣರಾಜ್ಯೋತ್ಸವದ ಅಂಗವಾಗಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಶಾಸಕರ ಭವನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ, ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.

ದೇಶದ ಏಕತೆ, ಸಮಗ್ರತೆ ಮತ್ತು ಸುರಕ್ಷತೆಯ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದೂ ಹೇಳಿದರು.

ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಆಡಳಿತದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಾಮಾನ್ಯ ಜನರ ದೈನಂದಿನ ಜೀವನಮಟ್ಟವನ್ನು ಸುಧಾರಿಸಲು ಇದು ಸುಸಮಯವಾಗಿದೆ ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸರ್ವಸ್ವವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯ ಯೋಧರು ಮತ್ತು ದೇಶಕ್ಕೆ ಸಮಗ್ರ ಸಂವಿಧಾನವನ್ನು ನೀಡುವಲ್ಲಿ ಶ್ರಮಿಸಿದ ಸಂವಿಧಾನ ರಚನಾ ಸಮಿತಿಯ ಸದಸ್ಯರೆಲ್ಲರ ಪ್ರಯತ್ನವನ್ನು ಸ್ಮರಿಸುವ ದಿನ ಇದಾಗಿದೆ ಎಂದು ಕಾಗೇರಿ ಹೇಳಿದರು.