ಬೆಂಗಳೂರು: ಅಧಿಕಾರ ಸ್ಥಾನ, ಮಾನ ನೀಡಿದ ಬಿಜೆಪಿಯನ್ನು ತೊರೆಯುವ ಪ್ರಶ್ನೆಯೆ ಇಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ವಿಧಾನಸೌಧದ ಬಳಿ ಗುರುವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ನಾವು 17 ಜನ ಬಿಜೆಪಿಯಿಂದ ಗೆದ್ದು ಶಾಸಕರಾದ ಮೇಲೆ ಪಕ್ಷ ಅಧಿಕಾರ ನೀಡಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರು ಮಾತು ಕೊಟ್ಟಂತೆ ನಡೆದು ಕೊಂಡಿದ್ದಾರೆ.ನಮಗೆ ಎಲ್ಲವೂ ಸಿಕ್ಕಿದೆ, ನಾವು ಯಾರೂ ಕೂಡ ಪಕ್ಷ ತೊರೆಯುವ ಪ್ರಶ್ನೆಯೇ ಬರುವುದಿಲ್ಲ. ಪದೇ ಪದೇ ಇಂತಹ ವಿಚಾರದ ಬಗ್ಗೆ ಗೊಂದಲ ಉಂಟು ಮಾಡುವವರೆ ಇದಕ್ಕೆ ಉತ್ತರ ನೀಡಬೇಕು ಎಂದು ಟಾಂಗ್ ನೀಡಿದರು.
ಬರುವ ಚುನಾವಣೆಯಲ್ಲೂ ಬಿಜೆಪಿಯಿಂದಲೇ ಮತ್ತೆ ಕಣಕ್ಕಿಳಿಯುತ್ತೇವೆ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿ ದೇಶದಲ್ಲೂ ಬಲಿಷ್ಟವಾಗಿ ಬೆಳೆದಿದೆ. ಇಂಥಹ ಸದೃಢ ಪಕ್ಷ ನಮಗೆ ಅಧಿಕಾರ, ಸ್ಥಾನ ಮಾನ ಎಲ್ಲವನ್ನೂ ನೀಡಿದೆ ಎಂದರು.
ಕೇಂದ್ರದಲ್ಲಿ ನರೇಂದ್ರಮೋದಿ ಮತ್ತು ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಜನಪರವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಕೊರೊನಾ ಮಧ್ಯೆಯೂ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆದಿವೆ.
ನಾವೂ ಕೂಡ ನಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ವಿನಾಕಾರಣ ಪಕ್ಷಾಂತರದ ಬಗ್ಗೆ ಮಾತನಾಡಬಾರದು ಎಂದು ಹೇಳಿದರು.
ಬೇರೆ ಪಕ್ಷಗಳವರು ಯಾರೂ ಕೂಡ ನಮ್ಮೊಂದಿಗೆ ಸಂಪರ್ಕದಲ್ಲಿ ಇಲ್ಲ. ಅದರ ಅವಶ್ಯಕತೆ ಕೂಡ ನಮಗಿಲ್ಲ.ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ. ನಾನು ಬೇರೆ ಪಕ್ಷಕ್ಕೆ ಹೋಗಿ ಮಾಡುವುದು ಏನೂ ಇಲ್ಲ ಎಂದು ಗೋಪಾಲಯ್ಯ ತಿಳಿಸಿದರು.
ಬಿಜೆಪಿ ನನಗೆ ಸಚಿವಸ್ಥಾನ ನೀಡಿದೆ. ಎರಡು ಜಿಲ್ಲೆಗಳ ಉಸ್ತುವಾರಿ ನೀಡಿದೆ. ನಮಗೆ ಇದಕ್ಕಿಂತ ಇನ್ನೇನು ಬೇಕಿದೆ. ರಾಜ್ಯದಲ್ಲಿ ಹಾಗೂ ಬಿಬಿಎಂಪಿಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಪಕ್ಷ ತೊರೆದು ಬಂದ ಎಲ್ಲ 17 ಜನರೂ ಕೂಡ ನಾವು ಒಟ್ಟಿಗೆ ಇದ್ದೇವೆ. ಮುಖ್ಯಮಂತ್ರಿಗಳ ಬದಲಾವಣೆ ವಿಚಾರಗಳು ಶುದ್ಧಸುಳ್ಳು, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ 6 ತಿಂಗಳಾಗಿದೆ ಅಷ್ಟೇ. ಆದರೆ ಅವರ ಬದಲಾವಣೆ ಕುರಿತು ಸುಳ್ಳು ಸುದ್ದಿಗಳನ್ನು ಕೆಲವರು ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.

