ಫೆ.1ರಿಂದ ನೈಟ್ ಕರ್ಫ್ಯೂ ರದ್ದು

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ರದ್ದು ಮಾಡಲಾಗಿದೆ.

ಅಲ್ಲದೆ ಶಾಲೆಗಳನ್ನು ಸೋಮವಾರದಿಂದ ಪುನರಾರಂಭಿಸುವುದರ ಜತೆಗೆ ಹಾಲಿ ಇರುವ ಕೆಲ ನಿಯಮಗಳನ್ನು ಸಡಿಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಬಿಎಂಪಿ ಅಧಿಕಾರಿಗಳ ಜೊತೆ ನಡೆಸಿದರು.

ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್ ಅವರು, ನೈಟ್ ಕರ್ಫ್ಯವನ್ನು ರದ್ದುಗೊಳಿಸಿ, ಶಾಲೆಗಳನ್ನು ಪುನಾರಂಭಿಸಲಾಗುವುದು ಎಂದು ಹೇಳಿದರು.

ಹೋಟೆಲ್ ಉದ್ಯಮ, ಮದ್ಯ ಮಾರಾಟ, ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಇದ್ದ ಶೇ.50ರಷ್ಟು ಮಿತಿಯನ್ನು ಕೂಡ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ದೇವಾಲಯಗಳಲ್ಲಿ ಪೂಜೆ ಮತ್ತಿತರ ಧಾರ್ಮಿಕ ಚಟುವಟಿಕೆಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಕೂಡ ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಎಲ್ಲ ಚಟುವಟಿಕೆಗಳು ಮಾರ್ಗಸೂಚಿಗಳ ಅನ್ವಯ ನಡೆಯಬೇಕು ಎಂದು ಹೇಳಿದರು.

ಆದರೆ ಸಿನಿಮಾ ಮಂದಿರ, ಸ್ವಿಮಿಂಗ್‍ಪೂಲ್, ಮದುವೆ ಸಮಾರಂಭಗಳಿಗೆ ಯಥಾ ರೀತಿಯಲ್ಲಿ ನಿಯಮಗಳು ಮುಂದುವರೆಯಲಿವೆ ಎಂದು ಸ್ಪಷ್ಟಪಡಿಸಿದರು.

ಸಭೆ-ಸಮಾರಂಭ, ಪ್ರತಿಭಟನೆ, ಯಾತ್ರೆಗಳಿಗೆ ಅವಕಾಶವಿಲ್ಲ. ಹೆಚ್ಚು ಜನ ಸೇರುವ ಹಾಗಿಲ್ಲ. ಇಂಥ ಕಾರ್ಯಕ್ರಮಗಳಿಗೆ ಹಿಂದಿನಂತೆ ನಿಯಮಗಳು ಅನ್ವಯವಾಗಲಿದೆ ಎಂದು ಅಶೋಕ್ ಹೇಳಿದರು.

ಕಳೆದ ಬಾರಿ ನಡೆದ ಸಭೆಯಲ್ಲಿ ತಜ್ಞರ ವರದಿ ಆಧರಿಸಿ ಬೆಂಗಳೂರಲ್ಲಿ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದರು. ಇದೀಗ ತಜ್ಞರು ಭೌತಿಕ ತರಗತಿ ಆರಂಭಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ  ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ ಶಾಲೆ ಪುನರಾರಂಭದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈಗ ರಾತ್ರಿ 10ರಿಂದ ಮುಂಜಾನೆ 5ರವರೆಗೆ ವಿಸಲಾಗಿರುವ ನೈಟ್ ಕರ್ಫ್ಯೂ ಮತ್ತು ಕೆಲವು ನಿಬಂಧನೆಗಳು ಫೆಬ್ರವರಿ 1ರಿಂದ ಅನ್ವಯವಾಗುವಂತೆ ಸಡಿಲಿಕೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ 3ನೇ ಅಲೆಯಲ್ಲಿ ಈ ಸೋಂಕು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿಲ್ಲ. ಜೊತೆಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಸಾಮಾನ್ಯ ಬೆಡ್, ಐಸಿಯು , ಆಕ್ಸಿಜನ್ ಕೊರತೆ ಎದುರಾಗಿಲ್ಲ ಎಂದು ವಿವರಿಸಿದರು.