ಬೆಂಗಳೂರು: ಮಂಡ್ಯ ಜಿಲ್ಲೆಯ ದಿವಂಗತ ನಾಯಕರು ಹಾಗೂ ಒಕ್ಕಲಿಗ ಸಮುದಾಯದ ಹಿರಿಯರೂ ಆಗಿದ್ದ ದಿವಂಗತ ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಲೋಕಸಭೆಯ ಮಾಜಿ ಸದಸ್ಯ ಎಲ್.ಆರ್.ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರ ಅನುಮತಿ ಪಡೆಯಲಾಗಿದ್ದು, ಶಿವರಾಮೇಗೌಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ಸೂಚಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಶಾಸಕಾಂಗ ನಾಯಕರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಸಮುದಾಯದ ಹಿರಿಯ ನಾಯಕರು ಹಾಗೂ ಇಡೀ ರಾಜ್ಯವೇ ಗೌರವಿಸುತ್ತಿದ್ದ ಜಿ. ಮಾದೇಗೌಡರಂಥ ಹಿರಿಯರ ಬಗ್ಗೆ ಶಿವರಾಮೇಗೌಡರು ಅಸಭ್ಯವಾಗಿ ಮಾತನಾಡಿರುವುದು ಅಕ್ಷ್ಯಮ್ಯ. ಮಾದೇಗೌಡರ ಬಗ್ಗೆ ಅವರು ಮಾತನಾಡಿರುವ ಆಡಿಯೋವನ್ನು ನಾನೂ ಕೇಳಿದ್ದೇನೆ. ಇಂಥ ನಡವಳಿಕೆಯನ್ನು ಸಹಿಸುವ ಪ್ರಶ್ನೆ ಇಲ್ಲ ಎಂದರು.
ಮಂಡ್ಯದ ರಾಜಕೀಯದ ಬಗ್ಗೆ ಮಾತನಾಡುತ್ತಾ ಶಿವರಾಮೇಗೌಡರು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಸಭ್ಯವಾಗಿ ಅವರು ಮಾತನಾಡಿರುವ ಮೊಬೈಲ್ ಕರೆಯ ಆಡಿಯೋ ಈಗ ವೈರಲ್ ಆಗಿದೆ. ತಮಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಅವರು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಮಾದೇಗೌಡರ ಬಗ್ಗೆ ಅಂತಹ ಕೆಳಮಟ್ಟದ ಭಾಷೆ ಬಳಸುವ ಅಗತ್ಯ ಇರಲಿಲ್ಲ ಎಂದು ಕುಮಾರಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಮಾದೇಗೌಡರಿಗೂ ಹಾಗೂ ನಮ್ಮ ಪಕ್ಷಕ್ಕೂ ರಾಜಕೀಯವಾಗಿ ವಿಭಿನ್ನತೆ ಇತ್ತು ನಿಜ. ಹಾಗೆಂದು ಅವರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದನ್ನು ಒಪ್ಪಲಾಗದು. ಅಲ್ಲದೆ, ಮಾದೇಗೌಡರು ಇಂದು ನಮ್ಮ ನಡುವೆ ಬದುಕಿಲ್ಲ. ದಿವಂಗತ ನಾಯಕರ ಹೆಸರನ್ನು ಶಿವರಾಮೇಗೌಡರು ಯಾಕೆ ತಂದರೋ ಗೊತ್ತಿಲ್ಲ. ಇಂತಹ ಮಾತುಗಳು ಯಾರಿಗೂ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ತಕ್ಷಣವೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ನಮ್ಮ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದೇನೆ. ಅಂತವರು ಪಕ್ಷದಲ್ಲಿ ಇದ್ದರೆ ಶೋಭೆ ಇರುವುದಿಲ್ಲ ಎಂದ ಕುಮಾರಸ್ವಾಮಿ ಅವರು; ಮಾತೆತ್ತಿದರೆ ಹಣದ ಬಗ್ಗೆ ಶಿವರಾಮೇಗೌಡ ಮಾತನಾಡುತ್ತಾರೆ. ಹಣವನ್ನು ಇವರೊಬ್ಬರೇ ಕಂಡಿಲ್ಲ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಣ ಖರ್ಚು ಮಾಡಿದ್ದೆ ಎಂದು ಹೇಳಿದ್ದಾರೆ. 30 ಕೋಟಿ ರೂ. ಖರ್ಚು ಮಾಡಿರೋದನ್ನು ಹೇಳಿಕೊಂಡಿದ್ದಾರೆ. ಅವರು ಅಷ್ಟು ಹಣವನ್ನು ಅದ್ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.
ಪದೇ ಪದೆ ಶಿವರಾಮೇಗೌಡರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇಲ್ಲಿಯವರೆಗೆ ಇಂಥ ಚಾಳಿಯನ್ನು ತಿದ್ದಿಕೊಳ್ಳುತ್ತಾರೆ ಅಂದುಕೊಂಡು ಸುಮ್ಮನಿದ್ದೆವು. ಆದರೆ ಅದು ಆಗಲಿಲ್ಲ. ಎಲ್ಲಕ್ಕೂ ಒಂದು ಇತಿಮಿತಿ ಇದೆ ಎಂದು ಅವರು ಹೇಳಿದರು.

