ನವದೆಹಲಿ:ರಾಷ್ಟ್ರೀಯ ನೂತನ ಶಿಕ್ಷಣ ನೀತಿ ದೇಶದ ಕಲಿಕೆಯ ದಿಕ್ಕನ್ನೆ ಬದಲಾವಣೆ ಮಾಡಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದರು.
ಸೋಮವಾರದಿಂದ ಆರಂಭವಾದ ಬಜೆಟ್ ಅಧಿವೇಶನದ ಮೊದಲ ದಿನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹಲವು ಸಾಧನೆಗಳನ್ನು ಪ್ರಶಂಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಮುಖವನ್ನೇ ಬದಲಾವಣೆ ಮಾಡಲಿದೆ. ಹತ್ತು ರಾಜ್ಯಗಳ 19 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾದೇಶಿಕ ಭಾಷೆಯಲ್ಲೇ ಕಲಿಕೆಯನ್ನು ಖಚಿತ ಪಡಿಸಲಾಗಿದೆ. ಕಳೆದ ವರ್ಷ 4.5 ಕೋಟಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿದ್ದಾರೆ ಎಂದು ವಿವರಿಸಿದರು.
ಮಹಿಳಾ ಸಬಲೀಕರಣ ಸರ್ಕಾರದ ಆದ್ಯತೆಯಾಗಿದೆ, ಉಜ್ವಲಾ ಯೋಜನೆ ಗೃಹಿಣಿಯರಿಗೆ ನೆರವಾಗಿದ್ದರೆ, ಉದ್ಯಮ ಆರಂಭಿಸುವವರಿಗೆ ಮುದ್ರಾ ಯೋಜನೆ ಸಹಾಯ ಒದಗಿಸುತ್ತಿದೆ. 33 ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ ನೀಡಲಾಗುತ್ತಿದೆ. ಮಹಿಳೆಯರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದರು
ಹಲವು ಸ್ವಸಹಾಯ ಗುಂಪುಗಳು ಸ್ವಾವಲಂಬಿಗಳಾಗಲು ಸರ್ಕಾರ ತರಬೇತಿ ನೀಡಿದೆ. ಬೇಟಿ ಬಚಾವೋ-ಬೇಟಿ ಪಡಾವೋ ಕಾರ್ಯಕ್ರಮ ಬಹಳಷ್ಟು ಮಹಿಳೆಯರಿಗೆ ಸಹಾಯ ಮಾಡಿದೆ. ಯುವತಿಯರ ಮದುವೆ ವಯಸ್ಸನ್ನು 18ರಿಂದ 21 ವರ್ಷಗಳಿಗೆ ಹೆಚ್ಚಿಸಲಾಗಿದೆ. ತ್ರಿಬಲ್ ತಲಾಖ್ ಪದ್ಧತಿಯನ್ನು ತೆಗೆದು ಹಾಕಲಾಗಿದೆ.
ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಹಲವು ಮಾರ್ಗಗಳನ್ನು ಒದಗಿಸಿಕೊಡಲಾಗಿದೆ. ಸಣ್ಣ ರೈತರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, 1.80 ಲಕ್ಷ ಕುಟುಂಬಗಳಿಗೆ ಕೇಂದ್ರ ಸರ್ಕಾರ ಅನುದಾನವನ್ನು ಹಂಚಿಕೆ ಮಾಡಿದೆ ಎಂದು ತಿಳಿಸಿದರು.
ದೇಶದ ಎಲ್ಲಾ ಬಡವರಿಗೂ ಮನೆ ಹೊಂದುವ ಹಕ್ಕನ್ನು ಸರ್ಕಾರ ಖಚಿತ ಪಡಿಸಿದೆ. ಯಾರೂ ಕೂಡಾ ಹಸಿವಿನಿಂದ ಮಲಗಬಾರದು ಎಂಬ ಕಾರಣಕ್ಕೆ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತಿದೆ.
ದೆಹಲಿ-ಮುಂಬೈ ಎಕ್ಸಪ್ರೆಸ್ ವೇಯನ್ನು ವಿಸ್ತರಣೆ ಮಾಡಲಾಗುತ್ತಿದ್ದು, ಇದು ಅತಿ ಉದ್ದದ ರಸ್ತೆಯಾಗಲಿದೆ. ಹೊಸ ಆಯಾಮದ ಸಾರಿಗೆ ವ್ಯವಸ್ಥೆಗೆ ಭಾರತ ಮುನ್ನುಡಿ ಬರೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಅವರ ಮಹತ್ವಾಕಾಂಕ್ಷಿ ಯೋಜನೆ ಆತ್ಮನಿರ್ಭರ ಭಾರತ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕಾ ವಲಯಗಳಿಗೆ ಬೆನ್ನೆಲುಬಾಗಿದೆ. 13 ಲಕ್ಷ ಎಂ ಎಸ್ ಎಂ ಇ ಗಳು ಸರ್ಕಾರದ ಯೋಜನೆಗಳ ಲಾಭ ಪಡೆದಿವೆ.
ಕೋವಿಡ್ ಸಂಕಷ್ಟದ ನಡುವೆಯೂ 7400 ಕೋಟಿ ರುಪಾಯಿ ಹೂಡಿಕೆಯ 40 ನವೋದ್ಯಮಗಳು 2021ರಲ್ಲಿ ಮುಂಚೂಣಿಗೆ ಬಂದಿವೆ. ಮೇಕ್ ಇನ್ ಇಂಡಿಯಾ ಮೂಲಕ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ ಹೇಳಿದರು.
ನಮ್ಮ ಸೈನಿಕರು ದೇಶಿ ನಿರ್ಮಿತ ಆಯುಧಗಳನ್ನು ಪಡೆಯುತ್ತಿದ್ದಾರೆ. ದೇಶಿಯ ತೇಜಸ್ ಯುದ್ಧ ವಿಮಾನಕ್ಕೆ ಅನುಮೋದನೆ ದೊರೆತಿದೆ. ಶಸ್ತ್ರಾಸ್ತ್ರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ನಮ್ಮ ಗುರಿಯಾಗಿದೆ.
ರಕ್ಷಣಾ ಕ್ಷೇತ್ರದಲ್ಲಿ ಏಳು ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಕಂಪೆನಿಗಳ ಅನುಕೂಲಕ್ಕಾಗಿ ಡ್ರೋಣ್ ನಿಯಮಗಳನ್ನು ಸರಳೀಕರಣ ಮಾಡಲಾಗಿದೆ ಎಂದು ಹೇಳಿದರು.
ಜನಧನ್ ಯೋಜನೆಯಡಿ ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಜೋಡಣೆ ಮಾಡಲಾಗಿತ್ತು. ಕೋವಿಡ್ ಸಂಕಷ್ಟ ಸಮಯದಲ್ಲಿ ಸುಮಾರು 44 ಕೋಟಿ ಬಡವರಿಗೆ ನೇರ ನಗದು ರವಾನೆ ಮಾಡಲಾಗಿದೆ ಎಂದು ಹೇಳಿದರು.
ಔಷಧಿ ವಲಯಕ್ಕೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಲಾಗಿದೆ. ಪಿ ಎಲ್ ಐ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಯೋಜನೆಗಳ ಮೂಲಕ ಆಯುರ್ವೇಧ ಮತ್ತು ದೇಶಿಯ ಚಿಕಿತ್ಸಾ ಪದ್ಧತಿಗಳ ಲಾಭವನ್ನು ಜನ ಪಡೆದುಕೊಳ್ಳುವಂತಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರನ್ನು ಸರ್ಕಾರ ಗೌರವಿಸಿದೆ ಎಂದು ರಾಷ್ಟ್ರಪತಿಗಳು, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮಪರ್ಣೆ ಮಾಡಿದರು.
ಪಶ್ಚಿಮ ಬಂಗಾಳದ ಕೊಲ್ಕಾತದ ದುರ್ಗಾ ಪೂಜೆ ಮತ್ತು ಪ್ರಯಾಗ್ ರಾಜ್ ನ ಕುಂಬ ಮೇಳವನ್ನು ವಿಶ್ವಸಂಸ್ಥೆಯ ಶಿಕ್ಷಣ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೋ) ಗುರುತಿಸಿರುವುದಕ್ಕೆ ರಾಷ್ಟ್ರಪತಿ ಹರ್ಷ ವ್ಯಕ್ತ ಪಡಿಸಿದರು.
ಆಫ್ಘಾನಿಸ್ತಾನದಲ್ಲಿ ದೇವಿಶಕ್ತಿ ಪೂಜೆಯ ವೇಳೆ ಉಂಟಾದ ಸಂಘರ್ಷವನ್ನು ಇದೇ ವೇಳೆ ರಾಷ್ಟ್ರಪತಿಗಳು ಖಂಡಿಸಿದರು.

