ಕಾವೇರಿ-ಪೆನ್ನಾರ್ ಸೇರಿ ಐದು ಅಂತಾರಾಜ್ಯ ನದಿಗಳ ಜೋಡಣೆ

ನವದೆಹಲಿ: ಈ ಬಾರಿಯ ಬಜೆಟ್ ನಲ್ಲಿ ‌ಐದು ಅಂತಾರಾಜ್ಯ ನದಿಗಳ ಜೋಡಣೆಯನ್ನು  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

ಇದಕ್ಕಾಗಿ ಕರಡು ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ ಎಂದು ತಿಳಿಸಿದ್ದಾರೆ.

ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ, ಯಮುನಾ-ಗಂಗಾ ಸೇರಿದಂತೆ ಒಟ್ಟು ಐದು ನದಿಗಳ ಜೋಡಣೆಗೆ ಕರಡು ಯೋಜನೆ ಸಿದ್ಧಗೊಳಿಸಲಾಗಿದೆ. ಸಂಬಂಸಿದ ರಾಜ್ಯಗಳ ನಡುವೆ ಒಮ್ಮತ ಮೂಡಿದ ಬಳಿಕ ನದಿ ಜೋಡಣೆಯನ್ನು ಅನುಷ್ಠಾನಕ್ಕೆ ತರುವುದಾಗಿ ಅವರು ಘೋಷಿಸಿದರು.

2022-23ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಣೆ ಮಾಡಲಾಗಿದೆ.

ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಗಂಗಾನಂದಿಯ ಉದ್ದಕ್ಕೂ 5 ಕಿ.ಮೀ. ಕಾರಿಡಾರ್‍ಗಳಲ್ಲಿ ರೈತರ ಭೂಮಿಯನ್ನು ಕೇಂದ್ರೀಕರಿಸಿ ರಾಸಾಯನಿಕ ಮುಕ್ತ ಕೃಷಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದರು.

ಕೃಷಿ ಉತ್ಪನ್ನ ಮೌಲ್ಯಗಳ ಸರಪಳಿಗಾಗಿ ನವೋದ್ಯಮಗಳನ್ನು ಬೆಂಬಲಿಸಲಾಗುತ್ತಿದ್ದು, ನಬಾರ್ಡ್ ಮೂಲಕ ಸಹ ಹೂಡಿಕೆ ಮಾದರಿಯಲ್ಲಿ ಸಂಯೋಜಿತ ಬಂಡವಾಳವನ್ನು ಸಂಗ್ರಹಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ರೈತರಿಗೆ ಆಧುನಿಕ ತಂತ್ರಜ್ಞಾನ ಒದಗಿಸಲು ಕೃಷಿ ಕ್ಷೇತ್ರದಲ್ಲಿರುವ ಉದ್ಯಮಗಳ ಸಹಕಾರದಲ್ಲಿ ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಲಾಗುವುದು.

ಕೃಷಿ ದಾಖಲಾತಿಗಳನ್ನು ಡಿಜಿಟಿಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಶೂನ್ಯ ಬಂಡವಾಳ ಮತ್ತು ಮೌಲ್ಯ ವರ್ಧನೆ, ನೈಸರ್ಗಿಕ ಕೃಷಿ ಉತ್ತೇಜನಕ್ಕೆ ರಾಜ್ಯಗಳಲ್ಲಿರುವ ವಿಶ್ವವಿದ್ಯಾನಿಲಯಗಳ ಮೂಲಕ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ನೀರಾವರಿ ಯೋಜನೆಯ ಸದ್ಬಳಕೆಗೆ 44,605 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.