ಜನರ ನಿರೀಕ್ಷೆ ಹುಸಿಯಾಗಿದೆ: ಬಜೆಟ್ ಬಗ್ಗೆ ಸಿದ್ದು ಪ್ರತಿಕ್ರಿಯೆ

ಬೆಂಗಳೂರು:ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ನಾನು ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ ನಾಡಿನ ರೈತರು, ಮಹಿಳೆಯರು, ಸಾಮಾನ್ಯ ವರ್ಗದ ಜನ ಹೆಚ್ಚು ನಿರೀಕ್ಷೆ ಇಟ್ಟಿದ್ದರು ಆದರೆ ಅವರ ನಿರೀಕ್ಷೆ ಹುಸಿಯಾಗಿದೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಬಜೆಟ್  ಬಗ್ಗೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು,ವಿಶೇಷವಾಗಿ ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರದ ಉತ್ತೇಜನಕ್ಕಾಗಿ ಕಾರ್ಯಕ್ರಮಗಳ ಘೋಷಣೆ ಆಗುತ್ತವೆಂಬ ನಿರೀಕ್ಷೆ ಇತ್ತು ಎಲ್ಲಾ ಹುಸಿಯಾಗಿದೆ ಎಂದರು.

ಕಳೆದ ವರ್ಷ 34 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದರು, ಈ ಬಾರಿ 39 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದಾರೆ. ಮುಂಬರುವ ವರ್ಷಕ್ಕೆ ಕೇಂದ್ರ ಸರ್ಕಾರ 11 ಲಕ್ಷದ 87 ಸಾವಿರ ಕೋಟಿ ಸಾಲ ಮಾಡುತ್ತಿದೆ ಎಂದು ಟೀಕಿಸಿದರು.

ಕಳೆದ ವರ್ಷ ದೇಶದ ಮೇಲೆ 135 ಲಕ್ಷ ಕೋಟಿ ಸಾಲ ಇತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಮನಮೋಹನ್ ಸಿಂಗ್ ಅವರ ಸರ್ಕಾರ ನಿರ್ಗಮಿಸುವವರೆಗೆ ಇದ್ದ ಒಟ್ಟು ಸಾಲ 53 ಲಕ್ಷ ಕೋಟಿ ರೂಪಾಯಿ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೇವಲ ಎಂಟೇ ವರ್ಷದಲ್ಲಿ 93 ಲಕ್ಷ ಕೋಟಿ ಸಾಲ ಮಾಡಿದೆ ಎಂದು ದೂರಿದರು.

ಕೊರೊನಾ ಸಂದರ್ಭದಲ್ಲಿ ಜನರಿಗೆ ಉದ್ಯೋಗ ನೀಡಿ ಹಸಿವಿನಿಂದ ಕಾಪಾಡಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಹಿಂದಿನ ಬಜೆಟ್ ನಲ್ಲಿ 37 ಸಾವಿರ ಕೋಟಿ ಕಡಿತ ಮಾಡಿದ್ದರು, ಈ ಬಾರಿ  ಕಳೆದ ಬಾರಿಗಿಂತ 25 ಸಾವಿರ ಕೋಟಿ ಅನುದಾನ ಕಡಿತ ಮಾಡಿದ್ದಾರೆ ಎಂದು ಆರೋಪಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಕಳೆದ ಬಾರಿಯ ಬಜಟ್ ಗಿಂತ 80 ಕೋಟಿ ಮಾತ್ರ ಹೆಚ್ಚು ಅನುದಾನ ನೀಡಿದ್ದಾರೆ. ದೇಶದಲ್ಲಿ ಕೊರೊನಾ ಇದೆ, ಯಾವಾಗ ಕಡಿಮೆಯಾಗುತ್ತೋ ಗೊತ್ತಿಲ್ಲ, ಹೀಗಿರುವಾಗ ಈ ಇಲಾಖೆಗೆ ಹೆಚ್ಚು ಅನುದಾನ ನೀಡಬೇಕಿತ್ತು ಎಂದು ಸಿದ್ದು ಹೇಳಿದರು.

ವಾಜಪೇಯಿ ಅವರ ಸರ್ಕಾರವೂ ನದಿ ಜೋಡಣೆ ಮಾಡುತ್ತೇವೆ ಎಂದು ಹೇಳಿತ್ತು, ಮತ್ತೇ ಈ ಸರ್ಕಾರವು ಅದೇ ಮಾತನ್ನು ಹೇಳಿದೆ.

ಮಹದಾಯಿ ಯೋಜನೆಗೆ ನೋಟಿಫಿಕೇಷನ್ ಆಗಿದೆ, ಕೆಲಸ ಆರಂಭಿಸಲು ಬಿಜೆಪಿಯವರಿಗೆ ಇನ್ನೂ ಆಗಿಲ್ಲ. ಮೇಕೆದಾಟು ಯೋಜನೆಗೆ ಅರಣ್ಯ ಅನುಮತಿ ಬೇಕಿದೆ, ಅದನ್ನು ಕೂಡ ಕೊಟ್ಟಿಲ್ಲ.

ಕೃಷ್ಣ ಮೇಲ್ದಂಡೆ ಯೋಜನೆಗೆ ನ್ಯಾಯಾಧೀಕರಣದ ಆದೇಶ ಆಗಿ ಸಾಕಷ್ಟು ಸಮಯ ಆಗಿದೆ, ಅದಕ್ಕೆ ನೋಟಿಫಿಕೇಷನ್ ಮಾಡಿಲ್ಲ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಮಾಡಿ ಎಂದು ಮನವಿ ಮಾಡಿದ್ದೆವು, ಅದಕ್ಕೆ ಈ ವರೆಗೆ ಅನುಮೋದನೆ ಕೊಟ್ಟಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಒಟ್ಟಾರೆ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ, ಅಭಿವೃದ್ಧಿ ಪರವಾದ, ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಜೆಟ್ ಇದಲ್ಲ. ಇದು ದೇಶವನ್ನು ವಿನಾಶ ಮಾಡುವ ‘ಸಬ್ ಕ ವಿನಾಶ್’ ಬಜೆಟ್. ಜನರ ನಂಬಿಕೆಗೆ ಸರ್ಕಾರ ದ್ರೋಹ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.