ಸಂಸದರು,ಸಿಎಂ ಗೆ ಅಭಿನಂದನೆ: ಕೇಂದ್ರ ಬಜೆಟ್ ಬಗ್ಗೆ ಡಿ.ಕೆ.ಶಿ. ವ್ಯಂಗ್ಯ

ಬೆಂಗಳೂರು:ಕರ್ನಾಟಕಕ್ಕೆ ಯೋಜನೆಗಳ ಸುರಿಮಳೆಯ ಬಜೆಟ್ ಕೊಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ಹಾಗೂ ಮುಖ್ಯಮಂತ್ರಿಗಳಿಗೆ  ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯ ವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಬಜೆಟ್ ಕುರಿತು ಮಾತನಾಡಿದ ಅವರು,ಎಲ್ಲ ರಂಗದಲ್ಲೂ ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ ಕೊಟ್ಟಿದ್ದಾರೆ ಹಾಗೂ ಕರ್ನಾಟಕದ ಹೆಸರನ್ನೂ ಪ್ರಸ್ತಾಪ ಮಾಡದಂತಹ ಬಜೆಟ್ ಅನ್ನು ಕೇಂದ್ರ ಸರ್ಕಾರ ಇಂದು ಮಂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಸಮಯದಲ್ಲಿ ಸರ್ಕಾರ ಯಾರಿಗೂ ನೆರವಾಗಲಿಲ್ಲ. ಅವರು ಘೋಷಿಸಿದ ಪರಿಹಾರವೂ ಜನರಿಗೆ ತಲುಪಲಿಲ್ಲ. ಹೀಗಾಗಿ ಕೇಂದ್ರ ಬಜೆಟ್ ನಲ್ಲಿ ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ ತಲಾ 4 ಲಕ್ಷ ರು. ಪರಿಹಾರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವೆಚ್ಚ ಭರಿಸುವ ನಿರೀಕ್ಷೆ ಇತ್ತು. ಅದೆಲ್ಲವೂ ಹುಸಿಯಾಗಿದೆ ಎಂದು ಹೇಳಿದರು.

ನಮ್ಮ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಕಿಂಚಿತ್ತಾದರೂ ಸ್ವಾರ್ಥ ಪ್ರದರ್ಶಿಸಿ ರಾಜ್ಯದ ಬಗ್ಗೆ ಯೋಚಿಸುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು ಆ ನಿರೀಕ್ಷೆ ಸುಳ್ಳಾಗಿದೆ ಎಂದರು.

ಇದು ಕೇಂದ್ರ ಬಜೆಟ್ ಅಲ್ಲ. ಕೋವಿಡ್ ಬಜೆಟ್ ಕೋವಿಡ್ ನಿಂದ ಜನ, ಸಮಾಜ, ಎಲ್ಲ ವರ್ಗದ ಜನ ಹೇಗೆ ನರಳಿದ್ದರೋ ಅದೇರೀತಿ ಈ ಬಜೆಟ್ ನಿಂದ ಕೂಡ ಎಲ್ಲ ವರ್ಗದ ಜನ ನರಳುವಂತಾಗಿದೆ ಎಂದು ತಿಳಿಸಿದರು.

ಕೋವಿಡ್ ಸಮಯದಲ್ಲಿ ತೊಂದರೆ ಅನುಭವಿಸಿ ಉದ್ಯೋಗ ಕಳೆದುಕೊಂಡವರು, ವ್ಯಾಪಾರ ಕಳೆದುಕೊಂಡವರು, ರೈತರು, ಕಾರ್ಮಿಕರು, ಚಾಲಕರು, ಅಸಂಘಟಿತ ಕಾರ್ಮಿಕರಿಗೆ ಈ ಬಜೆಟ್ ನಲ್ಲಿ ಸಣ್ಣ ನೆರವಾದರೂ ಸಿಕ್ಕಿದೆಯೇ? ಲಾಕ್ ಡೌನ್, ಸೀಲ್ ಡೌನ್ ನಿಂದ ತೊಂದರೆ ಅನುಭವಿಸಿದವರಿಗೆ ಯಾವುದೇ ನೆರವು ನೀಡಿಲ್ಲ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.