ಹುಸಿಯಾದ ತೆರಿಗೆದಾರರ ನಿರೀಕ್ಷೆ

ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮುಕ್ತಾಯಗೊಂಡಿದ್ದು, ಈ ಬಾರಿಯೂ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ.

2022-23ನೇ ಸಾಲಿನಲ್ಲೂ ಕೂಡಾ ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದು, ಸತತ ಮೂರು ವರ್ಷಗಳಿಂದ ಟ್ಯಾಕ್ಸ್ ಸ್ಲ್ಯಾಬ್ ನಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಮುಂದುವರಿಸಲಾಗಿದೆ.

ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿ ತೆರಿಗೆ ಪದ್ಧತಿಯಲ್ಲಿ ಕೆಲ ವಿನಾಯ್ತಿ ಸಿಗಬಹುದು ಎಂಬ ನಿರೀಕ್ಷೆಗಳು ಮೂಡಿದ್ದವು. ಆದರೆ ಬಜೆಟ್ ಭಾಷಣದಲ್ಲಿ ಇಂಥ ಯಾವುದೇ ಪ್ರಸ್ತಾವಗಳು ಮಂಡನೆಯಾಗಿಲ್ಲ.

ಆದಾಯ ತೆರಿಗೆಗೆ ಈ ಬಾರಿ ಯಾವುದೇ ಹೊಸ ಸೆಸ್ ಅಥವಾ ಸರ್‍ಚಾರ್ಜ್ ಸೇರಿಲ್ಲ ಎಂಬುದಷ್ಟೇ ಸಮಾಧಾನಕರ.

ಸ್ಪೀಕರ್ ಓಂ ಬಿರ್ಲಾ ಸೂಚನೆ ಮೇರೆಗೆ ಸಚಿವರು ಹಣಕಾಸು ವಿಧೇಯಕ ಮಂಡಿಸಿದರು.

ತೆರಿಗೆ ವಿಚಾರ ಮಾತನಾಡುವಾಗ ಮಹಾಭಾರತದ ಉಲ್ಲೇಖ ಹೊರತುಪಡಿಸಿದರೆ ಉಳಿದಂತೆ ಯಾವುದೇ ಕಾವ್ಯವನ್ನು ಈ ಬಾರಿಯ ಭಾಷಣದಲ್ಲಿ ಸಚಿವೆ ಉಲ್ಲೇಖಿಸಲಿಲ್ಲ.

ನಿರ್ಮಲಾ ಸೀತಾರಾಮನ್ ಅವರು 1 ಗಂಟೆ 33 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡಿದರು.